Wednesday 4 April 2012


ಅಜ್ಜನ ಸಂಚಿ

ನನ್ನನ್ನು ಕರೆಯುವರು ಅಜ್ಜನ ಸಂಚಿ
ಬದುಕು ಸಾಗಿಸುತ್ತಿದ್ದೆ  ತಾಂಬೂಲ ಹಂಚಿ
ತುಂಬುತ್ತಿದ್ದರು ನನ್ನ ಒಡಲಲ್ಲಿ ಎಲೆ ಅಡಿಕೆ ಸುಣ್ಣ
ತಾಂಬೂಲ ಪ್ರಿಯರು ಹಾಕುತಿದ್ದರು ನನ್ನ ಮೇಲೆ ಕಣ್ಣ

ಹೇಳಿಕೊಳ್ಳುವಂತ ಸೌಂದರ್ಯ ನನ್ನದಲ್ಲ
ಹಾಗಂತ ಕುರೂಪಿಗಳ ಸಾಲಲ್ಲಿ ನಾ ನಿಂತಿಲ್ಲ
ನನ್ನ ಬಣ್ಣ ಕಾಕಿ ಆದರೇನಂತೆ
ಅದು ದೇಶ ಕಾಯೊ ರಕ್ಷಕರ ಉಡುಪಿನ ಬಣ್ಣ ವಂತೆ

ಎಲ್ಲೇ ಹೋದರು ನಾ ಇರುತ್ತಿದ್ದೆ  ಅವರ ಜೊತೆಯಲ್ಲಿ
ಯಾವಾಗಲು ಇರುತಿತ್ತು ನಾ ಕೊಟ್ಟ ಎಲೆ ಅಡಿಕೆ ಅವರ ಬಾಯಲ್ಲಿ
ಆಗಾಗ ಸವರುತ್ತಿದ್ದರು ನನ್ನನ್ನು ಪ್ರೀತಿಯಿಂದ
ಕಾಪಾಡುತ್ತಿದ್ದರು ನನ್ನ ಅಷ್ಟೇ  ಜತನದಿಂದ

ಊಟ ತಿಂಡಿಯಾದರು ಬಿಡಬಹುದು ನಮ್ಮಜ್ಜ
ನನ್ನ ಬಿಟ್ಟು ಬದುಕಲಾರರು ಅನ್ನೋದು ಅಷ್ಟೇ ನಿಜ
ಯಾರಿಗುಂಟು ಯಾರಿಗಿಲ್ಲ ಇಂತಹ ಬಾಗ್ಯ
ಅಜ್ಜನ ಸೇವೆಯೇ ನನ್ನ ಜೀವನದ ಸೌಭಾಗ್ಯ

ಅಜ್ಜ ಮಲಗಿದರು ಒಂದು ದಿನ ಹಿಡಿದು ರೋಗ
ನಿಂತೆ ಹೋಯಿತು ಪಾಪ ಅವರ ತಾಂಬೂಲದ  ವೈಭೋಗ
ತಿನ್ನದಿದ್ದರೆ ಅವರು ಅನುದಿನ ತಾಂಬುಲ
ಇರುತಿದ್ದರೇನೊ ಇನ್ನು ಸ್ವಲ್ಪ ದಿನ ಎನ್ನೋ ಹಂಬಲ

ನನಗೂ ಅಜ್ಜನಿಗೂ ಅವಿನಾಭಾವ ಸಂಬಂಧ
ಆ ದೇವರಿಗೇ ಗೊತ್ತು ಇದು ಯಾವ ಜನ್ಮದ ಅನುಭಂದ
ಅಜ್ಜನಿಲ್ಲದ ನಾನು ದಿಕ್ಕಿಲ್ಲದ ಅನಾಥ
ನೇಲುತಿಹೆ ಗೂಟದಲಿ ಅಜ್ಜನ ನೆನಪಲ್ಲಿ ಅಳುತ


No comments:

Post a Comment