Thursday, 10 April 2014

ಹಲವು ಹತ್ತು ಜನ್ಮಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ. ಆದರೆ ಎಂತಹುದೇ ಶ್ರೇಷ್ಠ ಜನ್ಮಕ್ಕೂ ಸಾವು ಅನ್ನೋದು ತಪ್ಪೊಲ್ಲ. ಪ್ರತಿ ಹುಟ್ಟಿನ ಹಿಂದೆ ಸಣ್ಣ,ದೊಡ್ಡ ಅನ್ನೋ ಬೇದವಿಲ್ಲದೆ ಸಾವು ಖಚಿತ. ನಾವು ಯಾವುದರಿಂದ ಬೇಕಾದ್ರೂ ತಪ್ಪಿಸಿಕೊಳ್ಳ ಬಹುದು ಆದರೆ ಈ ಸಾವಿನಿಂದ ತಪ್ಪಿಸಿಕೊಳ್ಳೋಕೆ ಯಾವ ಬಲ, ಪ್ರಭಾವವೂ ಪ್ರಯೋಜನಕ್ಕೆ ಬರದು.ಪಾತಾಳಕ್ಕೆ ಹೋಗಿ ಅಡಗಿದರೂ ನಮ್ಮನ್ನೇ ಅನುಸರಿಸೋ ಸಂಗಾತಿ ಇದು. ಆದರೆ ಯಾರಿಗೆ,ಯಾವಾಗ ಎನ್ನೋದು ಮಾತ್ರ ಕೌತುಕವಾಗೇ ಇರುವಂತದ್ದು. ಏನಾದರೂ ದೊಡ್ಡ ರೋಗ ಬಂದು ಆಸ್ಪತ್ರೆ ಸೇರಿದರೆ ಡಾಕ್ಟರ್ ಇಷ್ಟು ದಿನ , ಇಷ್ಟು ತಿಂಗಳು ಅಂತ ಅಂದಾಜಿಸಿ ಅವರ ಬುದ್ದಿವಂತಿಕೆ ಪ್ರದರ್ಶನ ಮಾಡಬಹುದು. ಆದರೂ ನಿಖರವಾಗಿ ಹೇಳೊದು ಅಸಾಧ್ಯ.ಹೀಗಿರುವಾಗ ನಾವು ಎಂದೋ ಬರುವ ಸಾವಿಗಾಗಿ ಅಂಜೋದು ಎಷ್ಟರ ಮಟ್ಟಿಗೆ ಸರಿ.ಈ ಜನ್ಮದಲ್ಲೇ ನಾವು ಏನನ್ನಾದರೂ ಸಾಧಿಸಬೇಕು ಅಂತಿದ್ದರೆ ಮೊದಲು ನಾವು ಸಾವಿನ ಭಯ ಬಿಡಬೇಕು.ಈ ಭಯದಿಂದ ನಾವು ದೂರವಾಗದಿದ್ದರೆ ನಾವು ಏನನ್ನೂ ಸಾಧಿಸಲಾರೆವು.ಮಹತ್ತರವಾದ ಗುರಿಯ ಕಡೆ ಸಾಗುವಾಗ ಈ ಸಾವು ಅನ್ನೋ ಹೆದರಿಕೆ ಬಂದರೆ - ಅಯ್ಯೋ ನಾವು ಯಾಕಾಗಿ ಈ ಕೆಲಸ ಮಾಡಬೇಕು, ನಾನು ಮಧ್ಯದಲ್ಲೇ ಸತ್ತರೆ ಈ ಕೆಲಸ ಅಪೂರ್ಣ ವಾದೀತು ಅಥವಾ ಈ ಕೆಲಸ ಸಾಧಿಸಿ ಫಲ ಅನುಭವಿಸಲು ನಾನು ಇರುತ್ತಿನೋ ಇಲ್ಲವೋ..ಹೀಗೆ ಹಲವು ಹತ್ತು ನಕಾರಾತ್ಮಕ ಯೋಚನೆಗಳು ನಮ್ಮನ್ನು ಗುರಿಯ ಕಡೆ ಸಾಗದಂತೆ ತಡೆಯುತ್ತವೆ. ಅದಕ್ಕಾಗಿ ನಾವು ಸಾವಿನ ಭಯ ತೊರೆದು ಗುರಿಯ ಕಡೆ ಗಮನ ಹರಿಸೋಣ. Marquis de Veuvenargues ಹೇಳಿದ ಹಾಗೆ "To achieve great things we must live as though we were never going to die." ಅನ್ನೋ ಹಾಗೆ ಬದುಕೋಣ ಗುರಿಯ ಕಡೆ ಸಾಗೋಣ. ಸಾವು ಬಂದಾಗ ಬರುತ್ತೆ ಅದಕ್ಕಾಗಿ ಹೆದರದೆ ನಕಾರಾತ್ಮಕತೆ ಯನ್ನ ಓಡಿಸಿ ಸಕಾರಾತ್ಮಕವಾಗಿ ಯೋಚಿಸಿ ಸಾವಿಲ್ಲದ ಸರದಾರರು ಎಂದುಕೊಂಡು ಈ ಜೀವನದಲ್ಲಿ ಏನನ್ನಾದರೂ ಒಳ್ಳೆಯದನ್ನ ಸಾಧಿಸೋಕಡೆ ಗಮನ ಹರಿಸಿ ಜಯಶಾಲಿಗಳಾಗೋಣ.

Wednesday, 9 April 2014

ಇಂದಿನ ಈ ವೇಗದ ಯುಗದಲ್ಲಿ ಸಂಭಂದ ಎನ್ನೋದು ಪ್ರಾಮುಖ್ಯತೆ ಕಳೆದುಕೊಳ್ಳುತ್ತಾ ಇರೋದು ಆತಂಕಕಾರಿ ವಿಷಯ ಅಂದರೆ ತಪ್ಪಲ್ಲ . ತಮ್ಮನ್ನೇ  ತಾವು ಅವಲೋಕನ ಮಾಡಿಕೊಳ್ಳಲೂ ಸಮಯ ಇಲ್ಲದ ಅವಸರದ ಜೀವನವಾಗಿದೆ.ಎಲ್ಲರೂ ಹಣ,ಖ್ಯಾತಿ, ಹೀಗೆ ಒಂದೊಂದರ ಹಿಂದೆ ಓಡುತ್ತಿರುವ ಓಟದ ಕುದುರೆಗಳೇ ಆಗಿದ್ದಾರೆ. ಹೀಗಿರುವಾಗ ಸಂಭಂದ ಅನ್ನೋದು ಯಾರಿಗೂ ಬೇಡವಾಗುತ್ತಿರುವದು ಕಹಿ ಸತ್ಯ. ಮೊದಲೆಲ್ಲ ಮನೆ ಅಂದರೆ ಜನರಿಂದ ತುಂಬಿ ತುಳುಕುತ್ತಿತ್ತು.ಅವಿಭಕ್ತ ಕುಟುಂಬಗಳಿರುತ್ತಿದ್ದವು,ಜೊತೆಗೆ ನೆಂಟರು,ಇಷ್ಟರು ಅಂತ ಬಂದು ಹೋಗುವವರಿರುತ್ತಿದ್ದರು.ಮನೆ ಯಾವಾಗಲೂ ಮಾತು,ನಗುವಿನ ಸಂತೋಷದ ಅಲೆಗಳಿಂದ ತೇಲುತ್ತಿತ್ತು. ಆದರೆ ಈಗಿನ ಮನೆಗಳಲ್ಲಿ ಒಂದೋ ,ಎರಡೋ  ಮಕ್ಕಳಿದ್ದು ಸದ್ದೇ ಇಲ್ಲದ ಭೂತದ ಬಂಗಲೆಯಂತೆ ಬೀಕೊ ಅನ್ನುತ್ತಿರುತ್ತವೆ. ಅಪ್ಪ ಅಮ್ಮಂದಿರಂತೂ  ಮಕ್ಕಳ ಕಡೆ ಗಮನಕೊಡಲಿಕ್ಕೆ ಸಮಯ ಇರದವರು ಇನ್ನು ಬಂಧು ಬಳಗದವರಿಗೆಲ್ಲಿಂದ ತರುವದು ಸಮಯವನ್ನ ? ಪಾಪ ಆ ಮಕ್ಕಳಿಗಾದರೂ ಹೇಗೆ ತಿಳಿಯಬೇಕು ಸಂಭಂದಿಕರಾರೆಂದು ?ಇನ್ನು ಅಳಿದುಳಿದ ಬಂಧುಗಳಾದರೂ ಯಾಕೆ ಅಂತ ಬರುತ್ತಾರೆ ಬೀಗ ಜಡಿದ ಬಾಗಿಲನ್ನು ನೋಡಲು.ಇನ್ನು ಸಂಭಂದ ಅನ್ನೋದು ಉಳಿಯೋದಾದರೂ ಹೇಗೆ ಸಾಧ್ಯ. ಬಂದು ಹೋಗುವದು,ಮಾತಾಡುವದು ಎಲ್ಲಾ ಕಡಿಮೆಯಾಗುತ್ತ ಹೋದಂತೆ ಅವರೆಲ್ಲ ನಿಧಾನಕ್ಕೆ ನಮ್ಮ ಸ್ಮೃತಿ ಪಟಲದಿಂದ ಮಾಸುತ್ತ ಹೋಗಿ ಕೊನೆಗೊಮ್ಮೆ ಕಳೆದೇ ಹೋಗಿರುತ್ತಾರೆ.ಇಂಗ್ಲಿಷ್ ನಲ್ಲಿ ಒಂದು ಚಂದದ ಮಾತಿದೆ “Long absent,soon forgotten” ಅಂತ . ನಾವು ಯಾರಮೇಲಾದರೂ ಎಷ್ಟೇ ಪ್ರೀತಿ,ಅಭಿಮಾನ ಬೆಳೆಸಿಕೊಂದಿದ್ದರೂ ಆ ಸಂಭಂದಗಳನ್ನ ಜಿವಂತವಾಗಿರಿಸಬೇಕೆಂದರೆ ಆಗಾಗ ಮಾತಿನಿಂದಲೋ ಅಥವಾ ನೋಡುವದರಿಂದಲೋ ಹೀಗೆ ಯಾವದಾದರೊಂದು ರೀತಿಯಲ್ಲಿ ಹಾಜರಾತಿ ಅಷ್ಟೇ ಮುಖ್ಯವಾಗಿರುತ್ತದೆ. ತುಂಬಾ ಸಮಯದ ಗೈರು ಅನ್ನೋದು ಸಂಭಂದವನ್ನ ನಿಧಾನಕ್ಕೆ ಶಿಥಿಲಗೊಳಿಸುತ್ತಾ ಹೋಗುವದರಲ್ಲಿ ಸಂಶಯವಿಲ್ಲ. ಮರೆವು ಅನ್ನೋದು ಮನುಷ್ಯನಿಗೆ ಬೇಡದ ವಿಷಯದ ಜೊತೆ ಬೇಕಾದ ವಿಷವನ್ನು (ಸಂಭಂದವನ್ನೂ) ಮರೆಸಿ ವರದ ಜೊತೆ ಶಾಪವೂ ಆಗಿದೆ. ಹಾಗೆ ಅಂತ ಸಂಭಂದ ಉಳಿಸುತ್ತೇನೆ ಅಂತ ಕೆಲಸ ಕಾರ್ಯ ಬಿಟ್ಟು ಕೂರಲು ಅಸಾಧ್ಯದ ಮಾತು. ತುತ್ತಿನ ಚೀಲ ತುಂಬಲು ಈ ಕಾಲದಲ್ಲಿ ಎಲ್ಲರೂ ದುಡಿಯಬೇಕಾದ ಅನಿವಾರ್ಯತೆ ಇರುವದು. ಆದ್ದರಿಂದ ಒಂದು ಕಡೆ ಸಂಭಂದ ಉಳಿಸಿಕೊಳ್ಳುತ್ತ ಇನ್ನೊಂದುಕಡೆ ಈ ಕಾಲಕ್ಕೆ ಹೊಂದಿಕ್ಕೊಳ್ಳುತ್ತ ನಮ್ಮ ಜೀವನವನ್ನ ಸಮತೋಲನದಲ್ಲಿ ಇಟ್ಟುಕೊಳ್ಳೋದು ಅಷ್ಟೇ ಮುಖ್ಯವಾಗಿದೆ. ಹಾಗಾಗಿ ಈ ಅಧುನಿಕ ಸೌಕರ್ಯಗಳನ್ನೇ ಉಪಯೋಗಿಸಿಕೊಂಡು ಸಂಭಂದಿಕರಲ್ಲಿ ,ಅಪ್ತೆಷ್ಟರಲ್ಲಿ ತಿಂಗಳೋ ಎರಡು ತಿಂಗಳಿಗೊಮ್ಮೆಯೋ ದೂರವಾಣಿ ಮುಖಾಂತರ ಮಾತನಾಡುವದೋ ಇಲ್ಲಾ ವರುಷಕೊಮ್ಮೆಯಾದರೂ ಅವರಲ್ಲಿ ಹೋಗುವದು, ಮತ್ತು ಅವರನ್ನ ನಾವು ಕರೆದು ಸತ್ಕರಿಸುವದೋ ಮಾಡುವದರಿಂದ ನಮ್ಮ ಸಂಭಂದಗಳನ್ನ ಜೀವಂತವಾಗಿರಿಸಬಹುದು. ಪ್ರಾಣಿಗಳಾದರೂ ವಾಸನೆಯನ್ನು ಗ್ರಹಿಸುವದರಿಂದ ತಮ್ಮ ಸಂಭಂದಗಳನ್ನು ಗುರುತಿಸಿಕೊಳ್ಳುತ್ತವಂತೆ.ಮನುಷ್ಯರಾದ ನಮಗೆ ಆ ಶಕ್ತಿ ಇಲ್ಲ ನಿಜ ಆದರೆ ಬುದ್ಧಿ ಜೀವಿ ಎನಿಸಿಕೊಂಡ ಮನುಷ್ಯ ಮೇಲೆ ಹೇಳಿದ ರೀತಿಯಿಂದಲಾದರೂ ನಮ್ಮ ನಮ್ಮ ಸಂಭಂದಗಳನ್ನುಳಿಸಿಕೊಳ್ಳೋದರ ಮೂಲಕ  ಪ್ರಾಣಿಗಳಿಗಿಂತ ಮೇಲ್ಮಟ್ಟದ ಜೀವನವನ್ನ ನಮ್ಮದಾಗಿಸಿಕೊಳ್ಳೋಣ .