Tuesday, 22 October 2013

ನಾ ನಿನ್ನ ಮರೆಯುವದಾದರೂ ಹೇಗೆ....

ಭಾನುವಾರ, ಅಂದೂ ಹೀಗೆ ಧಾರಾಕಾರ ಮಳೆ ಸುರಿಯುತ್ತಿತ್ತು. ನಾನಾಗ ಕಾಲೇಜ್ ಓದುತ್ತಿದ್ದೆ. ನಾನು ಆಡಿ ಓದಿ ಬೆಳೆದಿದ್ದು ಒಂದು ಪುಟ್ಟ ಹಳ್ಳಿಯಲ್ಲಿ. ಆಗ ನಮ್ಮೂರಿಗೆ ಬಸ್ಸಿನ ಸೌಕರ್ಯವಿರಲಿಲ್ಲ.ಕಾಲೇಜಿಗೆ  ಹೋಗಬೇಕೆಂದರೆ ಸುಮಾರು ೨ ಮೈಲಿ ನಡೆದುಹೋಗಿ ಬಸ್ಸು ಹಿಡಿದು ಹೋಗಬೇಕಿತ್ತು. ನಡೆದು ಹೋಗಲು ಕೂಡ ಸರಿಯಾದ ರಸ್ತೆ ಇರಲಿಲ್ಲ  ಬದಲಾಗಿ ಹಲವಾರು ಮನೆಯ ಅಂಗಳ,ತೋಟಗಳ ನಡುವೆ ನಡೆದು ಮುಂದೆ ಹೋದಾಗ ರಸ್ತೆ ಸಿಗುತ್ತಿತ್ತು. ಆ ರಸ್ತೆಯ ತುದಿಯಲ್ಲಿ ಒಂದು ಬಸ್ ನಿಲ್ದಾಣ. ಎಸ್ಟೋ ಸಲ ರಸ್ತೆ ಬುಡದಲ್ಲಿ ಇರುವಾಗಲೇ ಬಸ್ ಗಳು ದೂಳೆಬ್ಬಿಸಿ ಹೋಗುವದನ್ನು ಅಸಹಾಯಕತೆಯಿಂದ ನೋಡಬೇಕಿತ್ತು. ನಾವು ನಿಲ್ದಾಣದ ವರೆಗೆ ಓಡಿದರು ತಲುಪೋ ವೇಳೆಗೆ ಬಸ್ಸು ಹೊರಟು ಹೋಗಿರುತ್ತಿತ್ತು. ಕೆಲವು ಡ್ರೈವರ್ ಗಳು ಹುಡುಗಿಯರ ಕಿರುನಗುವಿಗೆ ಶರಣಾಗಿ ಬಸ್ಸನ್ನು ಎಲ್ಲಿ ಬೇಕಾದರೂ ನಿಲ್ಲಿಸುತ್ತಿದ್ದರು. ಇದು ಹುಡುಗಿಯರಿಗೆ ದೇವರು ಕೊಟ್ಟ ಒಂದು ವರ ಅನ್ನಬಹುದೇನೊ. ಬಸ್ಸು ತಪ್ಪಿದ ದಿನ  ನಿಲ್ದಾಣದಲ್ಲಿ ಕಾಯುವಾಗ ನಮ್ಮೆಲ್ಲರ (ಒಂದೇ ಕಡೆಯಿಂದ ಬರುವಹುಡುಗಿಯರು) ಸುದ್ದಿಗಳಲ್ಲಿ ಬಂದು ಹೋಗೋ ಹಿರೋ ಅಂದರೆ ಗಜಾನನ.

 ಗಜಾನನ... ನಾ ನಿನ್ನ ಮರೆಯುವದಾದರೂ ಹೇಗೆ. ಕಾಲೇಜ್ ಗೆ ಹೋಗುವ ದಾರಿಯಲ್ಲಿ ಸಿಗುವ ಅನೇಕ ಮನೆಗಳಲ್ಲಿ ಈ ಗಜಾನನ ನ ಮನೆಯೂ ಒಂದು.ಗಜಾನನ  ಹಾಲು ಬಿಳುಪಿನ ಗುಂಗುರು ಕೂದಲಿನ ಹುಣ್ಣಿಮೆ ಚಂದಿರನ ಮುಖದ,ಅರಳು ಹುರಿದಂತೆ ಮಾತನಾಡುವ ಉತ್ಸಾಹದ ಚಿಲುಮೆಯಂತಿರುವ ಮುದ್ದು ಹುಡುಗ. ಆಗ ಅವನಿಗೆ ೩-೪ ವರುಷವಾಗಿತ್ತು. ದಿನಾಲೂ ಕಾಲೇಜ್ ಗೆ ಹೋಗುವಾಗ ಅಕ್ಕ ಅಂತ ಕರೆಯುತ್ತ  ಓಡೋಡಿ ಹೊರ ಚಾವಡಿಗೆ ಬರುತ್ತಿದ್ದ.ನಾನಂತೂ ೫ ನಿಮಿಷ ನಿಂತು ಅವನನ್ನು ಮುದ್ದು ಮಾಡದೇ ಹೋಗುತ್ತಲೇ ಇರಲಿಲ್ಲ. ಎಲ್ಲ ಹುಡುಗಿಯರ ಕಥೆಯು ಇದೇ ಆಗಿತ್ತು. ಅಂತಃ ಒಂದು ಆಕರ್ಷಣೆ ಗಜಾನನನಲ್ಲಿತ್ತು . ಒಮ್ಮೊಮ್ಮೆ ಕಾಲೇಜ್ ಗೆ ಹೊರಡುವಾಗ ತಡವಾಗಿ ಮಾತನಾಡದೆ ಹೋದರೆ ಆ ದಿನವೆಲ್ಲ ಅದೇನೋ ಮಂಕು ಕವಿದಂತೆ ಅನಿಸುತ್ತಿತ್ತು. ಅವನೂ ಕೂಡ ತಿಂಡಿ ತಿನ್ನುತ್ತಿದ್ದರೂ ಬಿಟ್ಟು ಓಡಿ ಬರುತ್ತಿದ್ದ. ಮನೆಗೆ ತಿರುಗಿ ಬರುವಾಗಲೂ ಅದೇ ದಾರಿ ಬಸ್ಸು ತಡವಾಗಿ ಬಂದದಿನ ಪಾಪ ಕಾದು ಕಾದು ಚಾವಡಿಯಲ್ಲೇ ಮಲಗಿಬಿಡುತ್ತಿದ್ದ. ಒಂದು ದಿನ ಕಾಲೇಜ್ ಗೆ ಹೋಗದಿದ್ದರೆ ಮಾರನೇ ದಿನ ನಿನ್ನೆ ಯಾಕೆ ಕಾಲೇಜ್ ಗೆ ಹೋಗಿಲ್ಲ ಅಕ್ಕಾ ನಿನಗೆ ಟೀಚರ್ ಕೋಲಲ್ಲಿ ಹೊಡೆಯೋಲ್ಲವ ಅಂತ ತನ್ನ ಮುದ್ದು ಮಾತಿನಿಂದ ವಿಚಾರಿಸುತ್ತಿದ್ದ.ಹೀಗೆ ಸಾಗುತ್ತಿದ್ದವು ದಿನಗಳು.

ಇವನ ಚುರುಕುತನ, ಆಟ  ಆ ದೇವರಲ್ಲೂ  ಹೊಟ್ಟೆಕಿಚ್ಚು ಹುಟ್ಟಿಸಿತೋ ಏನೋ  ಅಬ್ಬಾ ಅಂದು ಅದೆಂತಹ ಭೀಕರ ಮಳೆ.ಹೊಳೆ ಹಳ್ಳಗಳೆಲ್ಲಾ ತುಂಬಿ ಹರಿಯುತ್ತಿದ್ದವು.ನೀರಿನಲ್ಲಿ ಆಟವಾಡುವದೆಂದರೆ ಗಜಾನನನಿಗೆ ಪಂಚ ಪ್ರಾಣ.ಮನೆಯವರ ಕಣ್ಣು ತಪ್ಪಿಸಿ ಮನೆಯ ಮುಂದಿನ ತೋಟದ ತುದಿಯಲ್ಲಿ ಹರಿಯುತ್ತಿದ್ದ ಹೊಳೆಯ ಬಳಿ ಆಟ ಆಡಲು ಹೋಗಿದ್ದ.ವರುಣನ ಆರ್ಭಟಕ್ಕೆ ತುಂಬಿಹರಿದ ಗಂಗೆ ಉತ್ಸಾಹದ ಚಿಲುಮೆಯಾಗಿದ್ದ ಗಜಾನನ ನನ್ನು ತನ್ನ ಮಡಿಲಿಗೆ ಸೆಳೆದುಕೊಂಡುಬಿಟ್ಟಳು. ಉರಿದು ಬೆಳಗಬೇಕಿದ್ದ ದೀಪ ಕುಡಿಯಲ್ಲೆ ಕಮರಿತ್ತು.ಅಪ್ಪ ಅಮ್ಮನ ಮುದ್ದಿನ ಒಬ್ಬನೇ ಮಗನಾಗಿದ್ದ ಗಜಾನನ ನ ಪಾಲಿಗೆ ಆ ವಿಧಿ ಕ್ರೌರ್ಯ ಮೆರೆದಿತ್ತು. ಮಗನಿಂದ ಬೆಳಕಾಗಬೇಕಿದ್ದ ತಾಯಿ ತಂದೆಯರ ಬಾಳು ಕತ್ತಲಲ್ಲಿ ಬಿಕ್ಕಳಿಸಿತ್ತು. ಎಲ್ಲರ ಮನದಲ್ಲಿ ನೋವಿನ ಮೌನವನ್ನು ಹೆಪ್ಪುಗಟ್ಟಿಸಿ ತಾನು ಮಾತ್ರ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದ ಗಜಾನನ.
ಅಂದಿನಿಂದ ಅದೇನೋ ಈ ಭೀಕರ ಮಳೆ ನನ್ನ ಹೃದಯದಲ್ಲಿ ನೋವಿನ ಸಿಂಚನ ಗೈಯ್ಯುತ್ತಿದೆ . ಮನದಲ್ಲಿ  ಹೆಪ್ಪುಗಟ್ಟಿದ ನೋವು ಮೋಡದಂತೆ ಕರಗಿ ಗಂಗೆಯಾಗಿ ಕಣ್ಣಲ್ಲಿ ಪ್ರವಹಿಸಿದರೂ ಆ ನಿನ್ನ ನೆನಪು ಮತ್ತೆ ಮತ್ತೆ ಮೊಳಕೆಯೊಡೆವ ಹುಲ್ಲಿನಂತೆ ಮನದಲ್ಲಿ ಚಿಗುರಿ ನಿಲ್ಲುತ್ತವೆಯಲ್ಲೋ ಓ ಮುದ್ದು  
 ಗಜಾನನ... ನಾ ನಿನ್ನ ಮರೆಯುವದಾದರೂ ಹೇಗೆ.