Monday, 28 July 2014

ಸಾಮಾನ್ಯರಿಗೂ ಮತ್ತು ಅತಿ ಮೇಧಾವಿ ಅನಿಸಿಕೊಂಡವರಿಗೂ ಇರೋ ವ್ಯತ್ಯಾಸ ಹೇಗಿರುತ್ತೆ ಅಂದ್ರೆ 
ಸಾಮಾನ್ಯ ವಾದವರು ಅದರಲ್ಲೂ ಹೆಂಗಸರು ತಾವು ಇಷ್ಟ ಪಟ್ಟವರ ಜೊತೆ ಮಾತಾಡೋಕೆ,ಅವರನ್ನ ಅರಿತು ಕೊಳ್ಳೋಕೆ ಹೀಗೆ ಅವರ ಜೊತೆ ಸ್ವಲ್ಪ ಸಮಯ ಕಳೆಯೋಕೆ ಬಯಸುತ್ತಾರೆ..ಅದಕ್ಕಾಗಿ ಪ್ರಯತ್ನಿಸುತ್ತಾರೆ ಕೂಡ..ಅದೇ ಮೇಧಾವಿಗಳು ತುಂಬಾ ರಿಸರ್ಚ್ ಮಾಡೋರು ಅಯ್ಯೋ ಅವರ ಜೊತೆ ಸಮಯ ವ್ಯರ್ಥ ಮಾಡೋದು ನಮ್ಮ ಬುದ್ದಿವಂತಿಕೆ ಸರಿಯಲ್ಲ ಅಂತ ಅಥವಾ ಅವಳ ಪ್ರಯತ್ನವನ್ನ ಇದು ಯಾವದೋ mental illness ನ ಪ್ರಕಾರ ಇರಬಹುದು ಅಂತ ಇದ್ದ ಬದ್ದ ಸೈಕಲಾಜಿ ಬುಕ್ ಅನ್ನ ತಿರುವು ಹಾಕ್ತಾರೆ. ನಮ್ಮಲ್ಲಿ ಹಳಬರು ಒಂದು ಮಾತು ಹೇಳ್ತಿದ್ರು. ಸಣ್ಣಪುಟ್ಟ ಕಾಯಿಲೆಗಳು ಬಂದ್ರೆ ಯಾವಾಗಲೂ ದೊಡ್ಡ ದೊಡ್ಡ ಡಾಕ್ಟರ್ ಹತ್ರ ಹೊಗಬಾರದು ಅಂತ ಯಾಕೆಂದ್ರೆ ಅವರಿಗೆ ಚಿಕ್ಕ ಪುಟ್ಟ ಅಂದರೆ basic knowledge ಇರಲ್ಲ..ಅವರು ನಾವು ಶೀತ ಜ್ವರ ಅಂತ ಹೋದ್ರೆ ಅವರು ಅವರ ಬುಧ್ಹಿವಂತಿಕೆಗೆಅನುಸಾರವಾಗಿ ಇದು ಯಾವದೋ ದೊಡ್ಡ ಕಾಯಿಲೆ ಟಿಬಿ,ಅಸ್ತಮಾ,ಟೈಫ್ಹೊಯ್ದ್ ,ಜೊಂಡಿಸ್ ಹೀಗೆ ತರ ತರದ ಯೋಚನೆಯಿಂದ ಇದ್ದ ಬದ್ದ ಟೆಸ್ಟ್ ಮಾಡಿಸಿ ಕೊನೆಗೂ ರಿಸಲ್ಟ್ ಕಾಣಲ್ಲ..ಆಮೇಲೆ ನೀವು ಬೇಸತ್ತು general physician ಹತ್ರ ಹೋಗಿ ಅವರು ನಕ್ಕು ಒಹ್ ನೆಗಡಿ ಜ್ವರ ಇದೆಲ್ಲ ಮಾಮೂಲು ಅಂತ ಎರಡು ಮೂರೋ ದಿನಕ್ಕೆ ಮೇಡಿಸಿನ್ ಕೊಟ್ಟು ಕಳಸ್ತಾರೆ..ಆಗ ರೋಗಿಯು ಬೇಗ ಗುಣಮುಖ ಆಗೋದು ಸಹಜ...ಅದಕ್ಕೆ ಅಲ್ವಾ ದೊಡ್ಡವರೆಲ್ಲಾ ಜಾಣರಲ್ಲ....ಸಣ್ಣವರೆಲ್ಲ ಕೋಣರು ಅಲ್ಲ....

Sunday, 27 July 2014

ನನ್ನ ಮುದ್ದಿನ ಕರಿ....

ಹೌದು ಆಗಿನ್ನು ಪ್ರೈಮರಿ ಸ್ಕೂಲ್ ಓದ್ತಾ ಇದ್ದೆ...ನೆನಪಿನ ಪ್ರಕಾರ ಮೂರನೇ ಕ್ಲಾಸ್ ಇರ್ಬೇಕು. ನನ್ನ ಹತ್ತಿರ ಒಂದು ಕಪ್ಪು ಬೆಕ್ಕಿನ ಮರಿ ಇತ್ತು..ಅದು ಹುಟ್ಟಾ ಕುರುಡು..ಅದಕ್ಕೆ ಅದನ್ನು ಕಂಡರೆ ಯಾರಿಗೂ ಆಗ್ತಿರಲಿಲ್ಲ..ಅದು ಯಾವಾಗಲು ಅಟ್ಟದಲ್ಲೇ ಇರ್ತಿತ್ತು...ನನಗೆ ಮಾತ್ರ ಅದು ಅಂದರೆ ಪ್ರಾಣದಷ್ಟು ಪ್ರೀತಿ..ಅದಕ್ಕೂ ಅಷ್ಟೆ ನನ್ನ ದ್ವನಿಯಿಂದಲೇ ಗುರುತಿಸುತ್ತಿತ್ತು..ನಾನೂ ದಿನಾಲೂ ಅದನ್ನು ಎತ್ತಿ ಕೆಳಗೆ ತಂದು ಅದಕ್ಕೆ ಆಹಾರ ಕೊಟ್ಟು ನಂತರ ಅದನ್ನು ನನ್ನ ಕಾಲ್ಮೇಲೆ ಮಲಗಿಸಿಕೊಂಡೆ ನಾನೂ ತಿಂಡಿ ತಿಂತ ಇದ್ದೆ..ಮತ್ತೆ ಅದನ್ನ ವಾಪಸ್ ಅಟ್ಟದಲ್ಲಿ ಮಲಗಿಸಿ ನಾನು ಸ್ಕೂಲ್ ಗೆ ಹೋಗುತ್ತಿದ್ದೆ...ಎಲ್ಲರೂ ನನಗೆ ಬೈತ ಇದ್ದರು ಕಂಡಿತಾ ಏನಾದ್ರು ರೋಗ ಬರುತ್ತೆ ನಿನಗೆ ಅಂತ..ಪಾಪ ಅದರ ಕಣ್ಣಿಂದ ಯಾವಾಗಲೂ ನೀರು ತೊಟ್ಟಿಕ್ತಾನೆ ಇರ್ತಿತ್ತು...ಆದರೆ ನನಗೆ ಯಾವತ್ತು ಹೇಸಿಗೆ ಅನಿಸುತ್ತಿರಲಿಲ್ಲ...ನಾನು ಸ್ಕೂಲ್ ಇಂದ ಬಂದ ತಕ್ಷಣ ನಾನು ಗೇಟ್ ಹತ್ರ ಮಾತಾಡಿದ್ರು ಸಾಕು ಎಷ್ಟೊಂದು ಎಲರ್ಟ್ ಆಗಿರ್ತಿತ್ತು...ಕೆಳಗೆ ಬರೋಕಾಗದೆ ಅಟ್ಟದ ಏಣಿ ಸುತ್ತ ಕೂಗ್ತಾ ತಿರ್ಗ್ತಾನೆ ಇರ್ತಿತ್ತು..ನಾನೂ ಬಂದು ಕರಿ ಅಂತ ಕರೆದರೆ ಸಾಕು..ಇಳಿಯೊಕೆ ಆಗದೆ ಒಳ್ಳೆ ತಾಯಿ ಕಂಡ ಮಗುವಿನಂತೆ ಆಕ್ರಂದನ ಮಾಡ್ತಿತ್ತು...ಹೀಗೆ ನಮ್ಮಿಬ್ಬರದು ವಿಚಿತ್ರ ಮೈತ್ರಿ ಆಗಿತ್ತು...ಹೀಗೆ ದಿನ ಕಳೆದಂತೆ ಮರಿ ದೊಡ್ದಾಗ್ತಾ ಬಂತು ಸ್ವಲ್ಪ ಸ್ವಲ್ಪ ಅಂದಾಜಲ್ಲೇ ಅದು ಅಟ್ಟದಿಂದ ಮನೆಯ ಮಾಡಿನ ಮೇಲೆಲ್ಲಾ ಓಡಾಡೋಕೆ ಶುರು ಮಾಡಿತ್ತು..ಒಂದು ದಿನ ನಾನು ಸ್ಚೂಲ್ಗೆ ಹೋದಾಗ ಮಾಡಿನಿಂದ ಅಂಗಳಕ್ಕೆ ಬಿತ್ತು..ಅಲ್ಲೇ ಮಲಗಿದ್ದ ನಮ್ಮ ಮನೆ ನಾಯಿ ಹಿಡಿದೇ ಬಿಟ್ಟಿತ್ತು..ಮತ್ತೆ ಮನೆಯವರೆಲ್ಲ ಹೇಗೋ ತಪ್ಪಿಸಿ ಅಟ್ಟಕ್ಕೆ ಬಿಟ್ಟಿದ್ದರು..ನಾನು ಸ್ಕೂಲ್ ಇಂದ ಬಂದಾಗ ವಿಷಯ ತಿಳಿದ ನಾನು ಅಟ್ಟಕ್ಕೆ ಓಡಿದ್ದೆ...ಪಾಪ ಜೀವ ಹೋಗೋ ಸ್ಥಿತಿಯಲ್ಲಿತ್ತು ನನ್ನ ಮುದ್ದಿನ ಕರಿ..ನಾನು ಹತ್ತಿರ ಹೋಗಿ ಮಾತಾಡಿಸಿದಾಗ ತಲೆ ಎತ್ತೊಕು ಕಷ್ಟವಾಗಿ ಮಲಗಿದ್ದಲ್ಲೇ ದೊಡ್ಡದಾಗಿ ಆರ್ತನಾದ ಮಾಡಿತ್ತು...ನಾನು ನಿಧಾನವಾಗಿ ಎತ್ತಿ ನನ್ನ ತೊಡೆ ಮೇಲೆ ಮಲಗಿಸಿಕೊಂಡೆ..ಅದಕ್ಕೆ ಕಾಯುತ್ತಿತ್ತೋ ಅನ್ನುವಂತೆ...ಕಷ್ಟದಿಂದ ನನ್ನ ಕೈಯ್ಯ ನ್ನೊಮ್ಮೆ ನೆಕ್ಕಿ ಅಲ್ಲೇ ಪ್ರಾಣ ಬಿಟ್ಟಿತ್ತು....ಆಗ ನನಗೆ ಯಾರೋ ನನ್ನ ದೇಹದ ಒಂದು ಭಾಗವನ್ನೇ ಕತ್ತರಿಸಿದಂತೆ ಅನ್ನೋ ಭಾವನೆ ..ಮನಸ್ಸು ಹಗುರ ಅಗೋ ಅಷ್ಟು ಹೊತ್ತು ಅತ್ತು ನಾನೇ ನನ್ನ ಕಯ್ಯಾರೆ ಗುಡ್ಡದಲ್ಲಿ ಒಂದು ಹೊಂಡ ತೆಗೆದು ಅದನ್ನ ಮುಚ್ಚಿದ್ದೆ...ಈ ಮೂಕ ಪ್ರಾಣಿಗಳು ನಮ್ಮೊಂದಿಗೆ ಎಷ್ಟೊಂದು ಭಾವನಾತ್ಮಕ ಸಂಭಂದ ಬೆಳೆಸಿಕೊಳ್ಳುತ್ತವೆ..ಸ್ವಲ್ಪವೂ ಸ್ವಾರ್ಥ ವಿಲ್ಲದೆ ನಿರ್ಮಲ ಪ್ರೀತಿಯನ್ನ ತೋರಿಸುತ್ತವೆ...ಕರಿ ಇಗೋ ನಿನಗೊಂದು ನನ್ನ ನೆನಪಿನ ಅಶ್ರು ತರ್ಪಣ....

Sunday, 20 July 2014

ರಾಗವಿಲ್ಲದೇ ಭಾವವಿಲ್ಲ ..ಭಾವವಿಲ್ಲದೇ ಭಕ್ತಿ ಇಲ್ಲ 
ರಾಗ ಭಾವ ಭಕ್ತಿಗಳ ಸಮ್ಮಿಶ್ರವೇ
ಬಯಕೆಗಳ ಆಗರ...

Monday, 14 July 2014

(ಯಾವದೋ ಕಥೆ...ಇನ್ಯಾರದೋ ವ್ಯಥೆ...ಅಲ್ಪ ಸ್ವಲ್ಪ ವಾಸ್ತವಿಕತೆ.....ಸೇರಿದ ಹೂರಣ..ಈ ಕವಿತೆ..)

ಕನಸ ಕೂಸಿನ ಕಗ್ಗೊಲೆ 

ಭಾವ ನಾಡಿಯು ನಿಂತು ಕನಸ ಕೂಸಿನ ಕಗ್ಗೊಲೆಯಾಗಿ 
ಹೆಣವಿಂದು ನಾರುತಿದೆ ಮನದಂಗಳದಿ ನೋಡಾ 
ಕೊಳೆ ತೊಳೆಯಲೆಂದೇ ಅವತರಿಸಿಹಳು 
ಆಧ್ಯಾತ್ಮ ಗಂಗೆ
ದುಮ್ಮಿಕ್ಕಿ ಜಿಗಿದಿಹಳು ಕಂಗಳ ಕೊಳದಲ್ಲಿ 
ಕುರುಹುವನು ಬಿಡದಂತೆ ರಭಸದಲಿ ಹರಿದಿಹಳು 
ಭ್ರಮೆಯಿಂದ ವಾಸ್ತವಕೆ...ಮುಸುಕಿಂದ ಬೆಳಕಿಗೆ

ಸಲಹಲಾಗದೆ ಬಿಸುಟಿದ್ದೆ ಮೂಲೆಯಲಿ
ರೋಧಿಸುತ್ತಿತ್ತು ಆಗಾಗ ತಬ್ಬಲಿಯಂತೆ
ಎಲ್ಲಿಂದಲೋ ಅವತರಿಸಿ
ಬೇಡವೆಂದರೂ ಎತ್ತಿ ಮುದ್ದಿಸಿದೆ
ಅದಕಷ್ಟೇ ಸಾಕಾಯ್ತು ಚಿಗುರೊಡೆಯಿತು ದಳದಂತೆ
ಇಂದು ನಿನ್ನ ಅವಜ್ಞೆಯಲಿ ಹುಡಿಹುಡಿಯಾಗಿ
ಕಣ್ಣೆದುರೇ ನಡೆದೋಯ್ತು ಭ್ರೂಣ ಹತ್ಯೆ
ಸೂತಕದಿ ಮನ ರೋಧಿಸಿದೆ
ಕನಸುಗಾರ ನೀನಲ್ಲ ಕನಸ ಕೂಸಿನ ಕೊಲೆಗಾರ

Sunday, 13 July 2014

ಹೀಗೊಂದು ನೆನಪು....
ಆಗಿನ್ನು ಕಾಲೇಜ್ ಗೆ ಹೋಗ್ತಾ ಇರೋ ಸಮಯ....ಹೇಳ್ತಾರಲ್ಲ ಹುಚ್ಚು ಕೋಡಿ ಮನಸು ಅಂತ....ಆಗ ನಮಗೆ ಹಿರೋ ಆಗಿ ಕಾಡ್ತಾ ಇದ್ದವರು ಅಂದ್ರೆ ವಿಷ್ಣು ವರ್ಧನ್ ....ಅದರಲ್ಲೂ ಅವರ ಸುಪ್ರಭಾತ  ಸಿನೆಮಾ ತುಂಬಾ ಇಷ್ಟ ಆಗಿತ್ತು...ಅದೇ ಕಪ್ಪು ಸ್ಲೀವ್ ಲೆಸ್ ಟಿ ಶರ್ಟ್ ..ಹಾಕಿದ ವಿಷ್ಣುವರ್ಧನ್...ಅಂದ್ರೆ ಅಬ್ಬಾ...ಅದ್ಕೆ ಹೇಗಾದ್ರು ಮಾಡಿ ಅವರು  ಅದೇ ಡ್ರೆಸ್ ಹಾಕಿರೋ ಫೋಟೋ ತರಿಸಬೇಕು ಅಂತ ಹೇಗೆಲ್ಲ ಪ್ರಯತ್ನ ಪಟ್ಟಿದ್ದೆ..ಅಂತೂ ಕೊನೆಗೆ ಒಮ್ಮೆ ಯಾವದೋ ಪತ್ರಿಕೇಲಿ ಅವರ ಅಡ್ರೆಸ್ಸ್ ಸಿಕ್ಕಿದ್ದು ಆಯ್ತು..ನಾನ್ ಅವರಿಗೆ ಹೊಗಳಿ ಹೊಗಳಿ ಪತ್ರ ಬರೆದಿದ್ದು ಆಯ್ತು...ಮತ್ತೆ ಫೋಟೋ ಬರುತ್ತೋ ಇಲ್ವೋ ಅಂತ ಕಾದಿದ್ದು ..ಸಧ್ಯ ಜಿರಾಫೆ ಕತ್ತು ಆಗದೆ ಇರೋದು ನನ್ನ ಪುಣ್ಯ...ಒಂದು ಕಡೆ ಮನೆಯಲ್ಲಿ ಬಯ್ತಾರೆ ಅಂತ ಟೆನ್ಶನ್ ಬೇರೆ....ದಿನಾ ಭಾಸ್ಕರ (ಪೋಸ್ಟ ಮ್ಯಾನ್ ) ಬರೋದನ್ನೇ ಕಾದಿದ್ದೋ ಕಾದಿದ್ದು..ಆದರೆ ಕಾಯುವಿಕೆಯಲ್ಲೂ ಒಂತರ ಕುಶಿ ಇರುತ್ತೆ ಅಂತ ಗೊತ್ತಾಗಿದ್ದು ಆಗಲೇ...ಅಂತು ಒಂದು ದಿನ ನಿರಾಸೆ ಮಾಡದೇ ಬಂದೇ ಬಂತು ವಿಷ್ಣುವರ್ಧನ್ ಫೋಟೋ...ಆದರೆ ಭಂಧನ ಸಿನಿಮಾ ದ ರೆಡ್ ರೋಸ್ ಕೈಯಲ್ಲಿ ಹಿಡಿದ  ಫೋಟೋ ಕಳಿಸಿದ್ದರು...ನನಗೆ  ಆವತ್ತಂತು ಆಕಾಶ ಮೂರೇ ಗೇಣು ಅನ್ನೋ ಹಾಗೆ ಆಗಿತ್ತು....ಒಂದು ಹಳ್ಳಿ ಹುಡುಗಿ ಬರೆದ ಆ ಪತ್ರಕ್ಕೆ ಸ್ಪಂದಿಸಿ ..ನೀವು ಕೇಳಿದ ಫೋಟೋ ಈಗ ಇಲ್ಲ ಅದಕ್ಕಾಗಿ ನಿಮಗೆ ರೆಡ್ ರೋಸ್ ಕಳಿಸುತ್ತಿದ್ದೇನೆ ..ನಿಮ್ಮ ಅಭಿಮಾನ ,ಪ್ರೀತಿ ಸದಾ ಹೀಗೆ ಇರಲಿ ನಿಮ್ಮವ ವಿಷ್ಣು ವರ್ಧನ್ ಅಂತ ಬರೆದಿತ್ತು ಜೊತೆಗೆ ಅವರ ಸಿಗ್ನೆಚರ್.....ಅಬ್ಬಾ ಮಾರನೇ ದಿನ ಕಾಲೇಜ್ ಗೆ ಹೋಗಿ ಎಷ್ಟೋತ್ತಿಗೆ ಫ್ರೆಂಡ್ಸ್ ಗೆ ಫೋಟೋ ತೋರಿಸುತ್ತೀನೋ ಅನ್ನೋ ಕಾತರಕ್ಕೆ ರಾತ್ರಿ ಸರಿ ನಿದ್ದೆ ಕೂಡ ಬಂದಿರಲಿಲ್ಲ....ಆ ಸಮಯ ಎಷ್ಟು ಚನ್ನಾಗಿತ್ತು...ಯಾವ ಚಿಂತೆಯೂ ಇಲ್ಲದೇ ಹಕ್ಕಿಗಳ ತರಹ...ಆವತ್ತಿನಿಂದ ಇವತ್ತಿಗೂ ನನಗೆ ವಿಷ್ಣುವರ್ಧನ್ ಅವರ ಸುಪ್ರಭಾತ ಸಿನೆಮಾದ' ನನ್ನ ಹಾಡು ನನ್ನದು'  ಇಷ್ಟ....:)