Saturday, 29 March 2014

ಹೊಸವರುಷ....

ಅಂದು ಹೋದವ ಇಂದು ಮರಳಿದ 
ಋತು ರಾಜ ವಸಂತ 
ಜಗದತುಂಬ ತಂದು ಸುರಿದಿಹ 
ಹೊಸ ಸುಖ ಸಂತಸ 

ತಳಿರ ಚಿಗುರ ತೆಕ್ಕೆಯಲ್ಲಿ ಕೋಗಿಲೆಯೊಂದು ಹಾಡಿದೆ 
ಅರಳಿ ಬಿರಿದ ಹೂಗಳಲ್ಲಿ ದುಂಬಿ ಝೇಂಕರಿಸಿದೆ 
ಜಡತೆ ಹರಿದ ಅವನಿಯಿಂದು ನಗುವ ಬೀರಿದೆ 
ಮರಳಿ ಅಪ್ಪಿದ ವಸಂತನಾಲಿಂಗನದಿ ಸುಖಿಸಿದೆ

ಹೊಸತು ಆಸೆ ಹೊಸತು ಬಯಕೆ
ಮಡಿಲು ತುಂಬಿದೆ
ಹಳೆಯ ಕಹಿಯ ಹೋಳಿ ಮಾಡಿದ
ಭರವಸೆಯು ಮೂಡಿದೆ

ಹರುಷದೊನಲು ಹರಿದಿದೆ
ರೋಮಾಂಚನ ವಾಗಿದೆ
ಧಮನಿಗಳಲಿ ಹರಿದ ಸುಖಕೆ
ಹೊಸತನವು ಮೂಡಿದೆ