Wednesday 26 November 2014

ಇಲ್ಲೊಂದು ಪ್ರಣತಿ ಉರಿಯುತಿದೆ 
ತನ್ನ ಮೇರೆಯ ಮೀರಿ 
ದಗಿಸಿ ಪ್ರಜ್ವಲಿಸಿ ಶಾಖವನು ಎರಚಿ 
ತೈಲವೆರೆದರೆ ಕತ್ತಲೂ ಮಾಯಾ 
ಇದು ನಗುವ ನಂದಾದೀಪ ...
ಗಾಳಿಗೊಡ್ಡಿದರೆ ಗಾಡಂದಕಾರ
ನಿರ್ಲಿಪ್ತ ಶವದ ಸ್ಮಶಾನ ಮೌನ.........ಕೀಮ
ಅವನೊಬ್ಬ ಸನ್ಯಾಸಿ
ಮಾಡಿದ ಘನಘೋರ ಉಪದೇಶ
ಬ್ರಹ್ಮಚರ್ಯದ ಬಗ್ಗೆ
ರಾತ್ರಿ ಅವನಕೋಣೆಯಲಿ
ಊರ್ವಶಿಯರದ್ದೆ ಕಾರುಬಾರು ....
ಅವನೊಬ್ಬ ವಿಜ್ಞಾನಿ
ಹೇಳಿದ್ದೆಲ್ಲವೂ ವಾಸ್ತವ ಕಲ್ಪನೆಗಳ
ಜಗ ನಿಬ್ಬೆರಗಾಗೋ ಅಣಿಮುತ್ತುಗಳು
ಆದರವನ ಜೀವನದಲ್ಲಿ ಹೆಂಗಳೆಯರದೆ ಹಬ್ಬ...
ಉಪದೇಶವೆಂಬುದು ಆಚರಣೆಗಿಲ್ಲದ್ದು
ಜನರೆದಿರು ಪಾಂಡಿತ್ಯ ಪ್ರದರ್ಶನವಷ್ಟೆ
ಅವನುಪದೇಶವ ಅವನೇ ರೂಢಿಸಲಶಕ್ತ ನಾದರೆ
ಅವನೆಂತಹ ಸನ್ಯಾಸಿ...ಅವನೆಂತಹ ವಿಜ್ಞಾನಿ........ಕೀಮ
ನನ್ನಿಂದ ಆದ ತಪ್ಪಾದರೂ ಯಾವುದು ಅರಿಯೆ 
ನಿನ್ನೀ ಮೌನಕೆ ಅರ್ಥವನೂ ತಿಳಿಯೆ 
ಹೇಳಿಬಿಡು ಒಮ್ಮೆ ನನಗೆ ತಿಳಿವಂತೆ
ನಾ  ನಡೆವೆ  ಅದರಂತೆ...........................ಕೀಮ 

Thursday 20 November 2014

ಇವತ್ತು ಬೆಳಿಗ್ಗೆ ಉಪ್ಪಿಟ್ಟಿಗೆ ರವೆ ಹುರಿತಾ ಇರುವಾಗ ಇದ್ದಕ್ಕಿದ್ದಲ್ಲೇ ಅಳು ತಡೆಯದೆ ಒಂದೈದು ನಿಮಿಷ ಬಿಕ್ಕಿದೆ...ನನಗೆ ಆಶ್ಚರ್ಯ ನನಗೇನಾಯ್ತು ಅಂತ ಏನೋ ತೀವ್ರವಾದ ನೋವು ಮನಸ್ಸಿಗೆ ..ತುಂಬಾ ಯೋಚಿಸಿದಾಗ ನನ್ನೆದಿರು ಬಂತು ನಿಂತಿದ್ದು ಅದೇ ಮಂಜುಳ ಅಲ್ಲಲ್ಲ ಸರ್ಕಲ್ ಮಂಜುಳನ ಪ್ರತಿಬಿಂಬ....ದಿನಾಲೂ ಟಿವಿ ,ಪೇಪರ್ ,ಮುಖಪುಸ್ತಕ ಹೀಗೆ ಎಲ್ಲೆಂದರಲ್ಲಿ ಬರೇ ಮುಗ್ದ ಮಕ್ಕಳು ಲೈಂಗಿಕತೆಗೆ ಬಲಿಯಾಗುತ್ತಿದ್ದ ಸುದ್ದಿ ನನಗರಿವಿಲ್ಲದೇ ನನ್ನ ಮನಸ್ಸಿನ ಆಳದಲ್ಲಿ ಕೂತು ಚಡಪಡಿಕೆ ತಂದಿದೆ....ನಾನೂ ಹೆಣ್ಣಾಗಿರುವದಕ್ಕೋ ಏನೋ ನನ್ನ ಒಡಲೂ ಮೂಖವಾಗಿ ರೋಧಿಸುತ್ತಿದೆ....ಲೈಂಗಿಕತೆ ಇಬ್ಬರ ಒಪ್ಪಿಗೆ ಯಿಂದ ನಡೆದರೆ ..ಅದು ಮಿಲನ ಮಹೋತ್ಸವ,ವೈಭವ...ಅದೇ ಬಲವಂತದಿಂದ ನಡೆದರೆ ಧಾರುಣ..ಯಾರಿಗೂ ಮುದ ನೀಡದ ರಾಕ್ಷಸೀಯ ಕ್ರಿಯೆ ..ಇದು ಯಾಕೆ ಜನರಲ್ಲಿ ಅರಿವಾಗುತ್ತಿಲ್ಲ....ಪಾಪ ಈ ಮಂಜುಳನಂತವರ ಗತಿ ಊಹಿಸಿದರೆ ಹೆಣ್ಣು ಜನ್ಮ ಒಂದು ಶಾಪವೆನಿಸುತ್ತಿದೆ...ಹೌದು ಮಂಜುಳ ಯಾರು ಹೇಳ್ತೀನಿ......ಆಗಿನ್ನು ನಾನೂ ಹೈಸ್ಚೂಲ್ ಓದ್ತಾ ಇದ್ದೆ..ಮನೆಯಲ್ಲಿ ಅಮ್ಮ ತುಂಬಾ ಸ್ಟ್ರಿಕ್ಟ್ ಆಗಿ ,ಸಂಪ್ರದಾಯಿಕವಾಗಿ ಬೆಳೆಸಿದ್ದ ಕಾರಣ ಅಕ್ಕ ಪಕ್ಕದ ಮನೆಗೆಲ್ಲ ಹೋಗಿ ಮಾತಾಡ್ತಾ ಕೂರೋ ಅಭ್ಯಾಸ ಇರಲಿಲ್ಲ....ಅದಕ್ಕಾಗಿ ಪ್ರತಿವರ್ಷ ಸ್ಕೂಲ್ ರಜೆ ಬಂದಾಗ ನಾನು ಬೆಂಗಳೂರಿಗೆ ಅಣ್ಣನ ಮನೆಗೆ ಹೋಗ್ತಿದ್ದೆ...ಆ ಹಳ್ಳಿಯಲ್ಲಿ ಸರಿಯಾದ ಬಸ್ ವ್ಯವಸ್ಥೆ ಇರದ ಕಾರಣ ನಾಲ್ಕು ಘಂಟೆಗೆ ಬರೋ ಬಸ್ಸಗೇ ಹೊನ್ನಾವರಕ್ಕೆ ಹೋಗಿ ರಾತ್ರಿ ಎಂಟೋ ಒಂಬತ್ತೋ ಘಂಟೆಗೆ ಹೋಗೋ ಬೆಂಗಳೂರು ಬಸ್ ಹಿಡಿಬೇಕಾಗಿತ್ತು...ಹಾಗಾಗಿ ಬಸ್ ಸ್ಟ್ಯಾಂಡ್ ಅಲ್ಲಿ ತುಂಬಾ ಹೊತ್ತು ಕಳೆಯೋ ಪ್ರಸಂಗ......ಅಂತ ಒಂದು ಟೈಮ್ ಅಲ್ಲಿ ಕಣ್ಣಿಗೆ ಬಿದ್ದವಳು ಈ ಮಂಜುಳ...ಸರ್ಕಲ್ ಮಂಜುಳಾ ಎಂದೇ ಎಲ್ಲರ ಬಾಯಲ್ಲಿ ಪ್ರಸಿದ್ಧವಾದವಳು...ಯಾಕೆಂದರೆ ಹಗಲಿಡಿ ಅವಳು ಹೈವೇ ಬಸ್ ಸ್ಟಾಪ್ ಅಲ್ಲೇ ಕಳೆಯುತ್ತಿದ್ದಳು...ಸಾಯಂಕಾಲ ಆದ ತಕ್ಷಣ ಹೊನ್ನಾವರದ ಮೇನ್ ಬಸ್ ಸ್ಟ್ಯಾಂಡ್ ಗೆ ಬರುತ್ತಿದ್ದಳು....ನಾ ನೋಡಿದಾಗ ಮಂಜುಳ ಪ್ರಾಯದ ಹುಡುಗಿ...ಸುಮಾರು ಇಪ್ಪತ್ತೈದು ವರ್ಷ ಇರಬಹುದು.. ಇವಳು ಮಾನಸಿಕ ಅಸ್ವಸ್ಥೆಯಾಗಿದ್ದಳು...ಕೆದರಿದ ಕೂದಲು,ಹರಕಲು ಮೈ ಕಾಣುವಂತ ಬಟ್ಟೆ...ಬೆಳೆದ ಉಗುರುಗಳು ..ಕಾರಣವಿಲ್ಲದ ನಗು, ಏನೇನೋ ಅರ್ಥವಿಲ್ಲದ ಬಡಬಡಿಕೆ ...ಯಾರಾದರು ಕೊಟ್ಟ ತಿಂಡಿ ತಿನ್ನುತ್ತ ಅವಳದೇ ಲೋಕದಲ್ಲಿ ವಿಹರಿಸುತ್ತಿದ್ದವಳು....ವಯಸ್ಸಲ್ಲಿ ಅಷ್ಟು ದೊಡ್ದವಳಾದರೂ ಮುಖದಲ್ಲಿ ಅದೇನೋ ಮುಗ್ಧತೆ....ನಗುವ ಆ ಕಣ್ಣುಗಳಲ್ಲಿ ಅದೇನೋ ಹೊಳಪು.....ನಾನು ಎಷ್ಟೋ ಹೊತ್ತು ಅವಳನ್ನೇ ನೋಡುತ್ತಾ ಕುಳಿತಿದ್ದೆ....ಇದು ಪ್ರತಿ ವರ್ಷ ..ಸುಮಾರು ಮೂರು ನಾಲ್ಕು ವರ್ಷ ಸತತ ಸ್ಕೂಲ್ ರಜೆಯಲ್ಲಿ ನಾನು ಕಂಡ ದೃಶ್ಯ......ಆಮೇಲೆ ನಾನು ಕಾಲೇಜ್ ಗೆ ಹೊನ್ನಾವರಕ್ಕೆ ಹೋಗಲು ಶುರು ಮಾಡಿದಾಗ ಅವಳನ್ನ ದಿನಾಲೂ ಹೈವೇ ಸರ್ಕಲ್ ಅಲ್ಲಿ ನೋಡುತ್ತಿದ್ದೆ..ಅಷ್ಟು ವರ್ಷದಿಂದ ನಾನು ಯಾವ ಬದಲಾವಣೆಯನ್ನೂ ಅವಳಲ್ಲಿ ಕಾಣಲಿಲ್ಲ......ಹೀಗೆ ದಿನಗಳು ಉರುಳುತ್ತಿರಲು ಇದ್ದಕ್ಕಿದ್ದಂತೆ ಮಂಜುಳಾ ಸರ್ಕಲ್ಲಿಂದ ಕಾಣೆ ಆಗಿದ್ದಳು.....ಒಮ್ಮೆ ಕುತೂಹಲ ತಡೆಯದೆ ಸರ್ಕಲ್ ಅಲ್ಲಿ ಇರೋ ಒಂದು ಹಣ್ಣಿನ ಅಂಗಡಿಯವನ ಬಳಿ ಅವಳ ಬಗ್ಗೆ ವಿಚಾರಿಸಿದಾಗ ತಿಳಿಯಿತು ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಅವಳು ಗರ್ಭಿಣಿ ಎಂದು..ಕೇಳಿ ಅಲ್ಲೇ ಬಿಕ್ಕಳಿಸಿದ್ದೆ ಅವಳ ಅಸಹಾಯಕತೆ ಕಣ್ಣಮುಂದೆ ಕಟ್ಟಿದಂತಾಗಿ ...ಹಗಲೆಲ್ಲ ಹುಚ್ಚಿ ಥೂ ಅಂತೆಲ್ಲ ಉಗಿಯೋ ಜನರು ರಾತ್ರಿ ಆದಾಗ ಅದೇ ಹುಚ್ಚಿಯ ದೇಹವನ್ನೇ ರಣಹದ್ದುಗಳಂತೆ ಕುಕ್ಕುವದ ನೆನೆದು ... ಕೊನೆಗೊಂದು ದಿನ ತಿಳಿಯಿತು ಅವಳು ಮಗುವಿಗೆ ಜನ್ಮ ಕೊಡುವಾಗ ಸತ್ತಳು ಅನ್ನೋ ಸುದ್ಧಿ...ಹೀಗೆ ಮಂಜುಳನಂತವರು,ಅಸಹಾಯಕ ಮುಗ್ಧ ಮಕ್ಕಳು,ಹೀಗೆ ಅದೆಷ್ಟು ಹೆಣ್ಣು ಜೀವಗಳು ಇಂತ ಮೃಗೀಯ ವರ್ತನೆಗೆ ಬಲಿಯಾಗುತ್ತಿದ್ದಾರೋ ..ಇದಕ್ಕೆ ಉತ್ತರ ನೀಡುವವರಾರು ,ಇವರಿಗೆಲ್ಲ ಎಲ್ಲಿಯ ರಕ್ಷಣೆ...ತಮ್ಮಮೇಲೆ ಏನು ನಡೆಯುತ್ತಿದೆ ಎನ್ನೊ ಕನಿಷ್ಠ ಜ್ಞಾನವೂ ಇಲ್ಲದ ಇವರ ಪರಿಸ್ಥಿತಿ ಸುಧಾರಿಸುವದಾದರೂ ಎಂತು.......ಮನಸಾರೆ ಒಪ್ಪಿ ಸೇರಿ ಹೆಣ್ಣಿನ ಜನ್ಮಕ್ಕೆ ಸಾರ್ಥಕ್ಯ ಕೊಡುವ ಕ್ರಿಯೆ ಇಂದು ಬಲವಂತ ದೌರ್ಜನ್ಯದಿಂದ ಹೆಣ್ಣಿನ ಜನ್ಮವೇ ಶಾಪ ಅನ್ನೋ ಪರಿಸ್ಥಿತಿ ಬಂದಿರುವುದು ಶೋಚನೀಯ....ಇಂತವರಿಗೆಲ್ಲ ಧಿಕ್ಕಾರ ವಿರಲಿ....
ಸರಳ ಹಿಂದಿನ ಬದುಕಿದು
ನಿಂತ ನೀರಿನಂತೆ
ಕಾಣದೆಂದಿಗೂ ಹೊಸತು
ನವಿನತೆಗೆ ಹರಿಯಬೇಕಿದೆ
ಸುತ್ತುತ್ತ ನದಿಯಂತೆ
ಆದರದು ನಿನಗೆ ಕನಸು
ಬದುಕು ಸುಂದರ ಹೊರಗೆ ನಿಂತವರಿಗೆ
ಕನಸು ಕಾಣದಿರು ಮನವೇ
ಬಣ್ಣ ತುಂಬುವವರಿಲ್ಲದೆ
ಸೇರಿಬಿಡು ನಿನ್ನಾವರಣಕೆ
ಎಳೆದು ಕವಚವ ಸುತ್ತ
ಮರುಳೇ ಇಣುಕದಿರು ಇನ್ನೆಂದು
ಭ್ರಮೆಯ ಬದುಕಿನತ್ತ ....
ಎಂದು ಬರುವನೆ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ವಿರಹದಲಿ ಬೇಯುತಿಹೆ ಅವನಿಗಾಗಿ
ಹಸಿವು ನಿದ್ದೆಯರಿವಿಲ್ಲ ಅವನಿಂದಾಗಿ 
ಎಂದು ಅರಿವನೇ ಸಖಿ ನನ್ನ ಮನದೊಲವು
ಅವನ ನೆನಪೇ ಮೈ ಪುಳಕವೆಬ್ಬಿಸಿದೆ
ಕೆನ್ನೆ ಕೆಂಪೇರಿ ಕಂಗಳಲಿ ಮಿಂಚು
ತನುವೆಕೋ ಕಂಪಿಸಿದೆ ಹೊಸ ಭಾವದಲಿ ಮಿಂದು
ಎಂದು ಬರುವನೇ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ತಿಳಿಸದಲೇ ಆಲಿಸಬಲ್ಲನೇ ಅವ
ನನ್ನ ಹೃದಯದ ಕೂಗು
ಜಾಣನವ..ಶೂರನವ ಯಾರಿಗೂ ಹೆದರದ ಧೀರನು
ಎಂದು ಬರುವನೇ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ಅವ ಬಂದ ಆ ದಿನವೇ ನನ್ನ ಪಾಲಿಗೆ ಸ್ವರ್ಗ
ಪ್ರೇಮ ಜಾತ್ರೆಯಲಿ ಮೆರವಣಿಗೆಯ ಹಬ್ಬ
ಕಾಯುತಿರುವೆನು ನಾ ಕಾತರದಿ ಅವನಾಗಮನಕೆ
ಎಂದು ಬರುವನೇ ಸಖಿ ಅವ ನನ್ನ ಬಳಿಗೆ
ಜೀವ ಕೈಯ್ಯಲ್ಲಿಡಿದು ನಾ ಕಾಯ್ವ ಪರಿಗೆ
ಅತ್ತಿತ್ತ ಹೊರಳದ ಚಿತ್ತ ಭಿತ್ತಿಯಲಿ 
ಅಳಿಸಲಾರದ ಚಿತ್ರ ಬರೆದೊತ್ತಿ ಹೋದೆ
ಅದಾವ ಜನ್ಮದ ಬಂಧ ತಂದರುಹಿದ 
ಅದ್ಭುತ ಕಲೆಗಾರನೋ ನೀನು 
ಈ ಕಲೆಯನ್ನಾರಾಧಿಸೋ ನಿಮಿತ್ತವಷ್ಟೇ ನಾನು ...................ಕೀಮ .
ಕಣ್ಣಿನ ಗಡಿಯ ದಾಟಿ ಒಂದೊಂದು ಮಣಿಯಂತೆ 
ನೀ ಉರುಳುವುದ ನೋಡಿ ಆ ಸಮುದ್ರದ 
ಮುತ್ತು ನಾಚಿ ಚಿಪ್ಪೊಳಗೆ ಸೇರಿತು........ಕೀಮ
ಕಾರ್ಗತ್ತಲಿನ ಬದುಕಲ್ಲಿ 
ನಿನ್ನಾಗಮನ ಬೆಳಕೆಂದು ತಿಳಿದೆ
ಆ ಬೆಳಕಲ್ಲೇ ಹಲವು ಕನಸುಗಳ ಕಟ್ಟಿ 
ನಾ ನಗುವ ಚೇತನವಾದೆ 
ಓ ವಿಧಿಯೇ ದೂರ ಮಾಡದಿರು 
ನನ್ನ ಬೆಳಕನ್ನ......ಮರೆಸದಿರು
ನನ್ನ ನಗುವನ್ನ............................................ಕೀಮ

Monday 10 November 2014

ಮಗನ ಬಿಟ್ಟು ಬರ್ತಾ ಇದ್ದೆ...ಸಿಗ್ನಲ್ ಅಲ್ಲಿ ಕಾರ್ ನಿಲ್ಸಿದಾಗ ಪಕ್ಕದಲ್ಲೇ ಬಸ್ಸು ನಿಂತಿತ್ತು...ಸುಮ್ಮನೆ ಮೇಲೆ ನೋಡಿದೆ..ಅಲ್ಲಿಯ ಡ್ರೈವರ್ ನೋಡಿದಾಗ ಅವನು ನನ್ನ ಕಡೆನೇ ನೋಡಿ ಸ್ಮೈಲ್ ಮಾಡಿದ ...ಮನಸ್ಸು ಯಾಕೋ ಫ್ಲಾಶ್ ಬ್ಯಾಕ್ ಗೆ ಹೋಯ್ತು...ನಾವು ಕಾಲೇಜ್ ಓದ್ತಾ ಇದ್ವಿ ಆಗ...ನಾವು ಹೋಗುವ ಬಸ್ನ ಡ್ರೈವರ್ ಬಾಬು ಅಂತ ಇದ್ದ..ನೋಡಲು ತುಂಬಾ ಚಂದ...ಬೆಳ್ಳಗೆ ಎತ್ತರ ಒಂತರ ಟೈಗರ್ ಪ್ರಭಾಕರನ ಹಾಗೆ ಆದರೆ ಮುಖ ಹಾಗಲ್ಲ..ಯಾವಾಗಲೂ ನಗು ಮುಖ...ನಕ್ಕಿದರೆ ಚಂದದ ಹಲ್ಲು ಆದರೆ ತಲೆ ಮಾತ್ರ ಸ್ವಲ್ಪ ಬಾಲ್ಡ್....ಹುಡುಗೀರ್ ಬಗ್ಗೆ ತುಂಬಾ ಕಾಳಜಿ ..ಎಷ್ಟೆಂದರೆ ಒಂದು ಸ್ಮೈಲ್ ಹಾಕಿದರೆ ಸಾಕು ಬಸ್ ಎಲ್ಲೇ ಬೇಕಿದ್ರು ನಿಲ್ತಿತ್ತು...ವಾರದಲ್ಲಿ ಮೂರು ದಿವಸ ನಮ್ಮ ಟೈಮ್ ಬಸ್ಸಿಗೆ ಅವನಿರುತ್ತಿದ್ದ...ಆದ್ದರಿಂದ ಮೂರು ದಿವಸ ಬಸ್ ತಪ್ಪುತ್ತೆ ಅನ್ನೋ ಚಿಂತೆನೇ ಇರಲಿಲ್ಲ....ಸೀಟ್ ಸಿಕ್ಕದೆ ಇದ್ರೂ ಪರವಾಗಿರಲಿಲ್ಲ...ಯಾಕೆಂದರೆ ಅವನ ಸೀಟ್ ನ ಹಿಂದೆ ನಿಂತುಕೊಳ್ಳುತ್ತಾ ಇದ್ವಿ..ಇದರಿಂದಾಗಿ ತುಂಬಿ ತುಳುಕುತ್ತಿದ್ದ ಬಸ್ ಅಲ್ಲಿ ಬೇರೆಯವರ ಕಾಟದಿಂದ ಮುಕ್ತಿ ಸಿಗುತ್ತಿತ್ತು...ನಾವು ಎಲ್ಲಾದರೂ ರೋಡ ಅಲ್ಲಿ ನಡೆದು ಹೋಗುವಾಗ ಕಂಡ್ರೆ ಜೋರಾಗಿ ಒಂದು ಹಾರ್ನ್ ಮಾಡ್ತಿದ್ದ..ನಮಗೆಲ್ಲ ಆ ಹಾರ್ನ್ ಇಂದಲೇ ಬಾಬು ಡ್ರೈವರ್ ಬರ್ತಾ ಇದ್ದಾನೆ ಅಂತ ಗೊತ್ತಾಗ್ತಿತ್ತು...ತಿರುಗಿ ನೋಡಿದ್ರೆ ಸಾಕಿತ್ತು ಕೈ ಮಾಡಿ ಹೋಗ್ತಿದ್ದ...ಯಾವತ್ತೂ ಕೆಟ್ಟದಾಗಿ ನಡ್ಕೋತಾ ಇರ್ಲಿಲ್ಲ....ಒಂದು ಸಕ್ಕರೆ ಸ್ಮೈಲ್...ಮತ್ತು ಒಮ್ಮೊಮ್ಮೆ ಕೈ ಮಾಡಿ ಹೋಗುತ್ತಿದ್ದ ಬಾಬು ಡ್ರೈವರ್....ಹೆಚ್ಚಾಗಿ ಡ್ರೈವರ್ಗಳೆಂದರೆ  ಮೂಗು ಮುರಿಯುವವರೇ ಹೆಚ್ಚು ..ಆದರೆ ಇಂತಹ ಅಪರೂಪದ ಬಾಬು ಡ್ರೈವರ್ ಅಂತವರೂ ಇರ್ತಾರೆ ಅನ್ನೋದು ಹಲವರು ಮರೆತಿರುತ್ತಾರೆ....ಯಾರನ್ನೇ ಆಗಲಿ ಅವರ ವೃತ್ತಿಯಿಂದ ಅಳೆಯುವದು ಅಪರಾಧ...ಎಲ್ಲರಲ್ಲೂ ಒಬ್ಬ ಹೃದಯವಂತ ಅನ್ನೋನು ಇದ್ದೇ ಇರುತ್ತಾನೆ...


ನಿನ್ನ ಕಾಣದೆ ಬೇಸತ್ತು
ಸುತ್ತಿ ಸುತ್ತಿ ಭ್ರಮಣಿಯಂತೆ
ನಾ ಬಂದು ನಿಲ್ಲುವದು ಮೂಲಕ್ಕೆ .......ಕೀಮ 
ಭಾವಗಳು ಬತ್ತಿ ಬರಡಾಗಿರುವ 
ಪ್ರೀತಿಯ ಗಾಳಿಯೇ ಬೀಸದ 
ನಿನ್ನಲ್ಲಿ ನನ್ನ ಆಸೆ ಹೂಗಳರಳಲು ಹೇಗೆ ಸಾಧ್ಯ......ಕೀಮ
ಧೈರ್ಯಂ ಸರ್ವತ್ರ ಸಾಧನಂ ಅನ್ನೋದು ಕೆಲವುಸಲ ಎಷ್ಟೊಂದು ನಿಜ ಅನಿಸುತ್ತೆ...ಆವತ್ತಿನ ದಿನ ಇನ್ನೂ ಕಣ್ಣಿಗೆ ಕಟ್ಟಿದಂತಿದೆ....ಆಗಿನ್ನೂ ಡ್ರೈವಿಂಗ್ ಕಲಿತ ಹೊಸದು...ನನ್ನದು ಮಾರುತಿ 800 ಆಗಿತ್ತು...ನನ್ನ ಯಜಮಾನರು ಸೆಕೆಂಡ್ ಹ್ಯಾಂಡ್ ಕಾರ್ ಸಾಕು ಸ್ವಲ್ಪ ಸಮಯ ...ಕಲಿತ ಹೊಸದರಲ್ಲಿ ಅಲ್ಲಿ ಇಲ್ಲಿ ಗುದ್ದಿ ಹಾಳಾಗುತ್ತೆ ಅಂತ ಹೇಳಿದ್ದರು...ಅದಕ್ಕಿಂತ ಹೆಚ್ಹಾಗಿ ನನ್ನ ಡ್ರೈವಿಂಗ್ ಸ್ಟೈಲ್ ಗೊತ್ತಿದ್ದ ಅವರು ಇವಳಿಗೆ ಈಗಲೆ ಹೊಸ ಕಾರ್ ಕೊಡಿಸಿದರೆ ದಿನ ತಾನು ಪೋಲಿಸ್ ಸ್ಟೇಷನ್ ಸುತ್ತೋ ಪ್ರಸಂಗ ಬರುತ್ತೆ ಅಂತ ಅರಿತಿದ್ದರು...ನನಗೋ ಡ್ರೈವಿಂಗ್ ಕಲಿತ ಹೊಸದು ಯಾವುದಾದರೇನು ಒಟ್ಟಾರೆ ಕಾರ್ ಸಿಕ್ತಲ್ಲ ಅನ್ನೋ ಕುಶಿ....ಪಾಪ ಆ ಕಾರ್ ಗೂ ಒಡತಿಯ ಮನಸ್ಸು ತಿಳಿದಿತ್ತೋ ಏನೋ ಆತುರಗಾರನಿಗೆ ಬುದ್ಧಿ ಮಟ್ಟ ಅಂತ ... ತಾನೂ ಒಡತಿಯ ವೇಗಕ್ಕೆ ಓಡಿದರೆ ಈ ಒಡತಿ ತನ್ನನ್ನ ಗುಜರಿಗೆ ಕಳಿಸುತ್ತಾಳೆ ಅಂತ... ಅದಕ್ಕೆ ಅದು ಇದ್ದಕ್ಕಿದ್ದಲ್ಲೇ ಆಗಾಗ ಎಲ್ಲೆಂದರಲ್ಲಿ ನಿಂತು ಸ್ಲೋ ಮಂತ್ರ ಉಪದೇಶಿಸುತ್ತಿತ್ತು.....ಆವತ್ತು ಹಾಗೆ ಆಯ್ತು...ಎಲ್ಲೋ ಬೇಗ ಹೋಗೋಣ ಅಂತ ಹೊರಟೆ ಈ ಕಾರಿನದ್ದೋ ಬದಲಾಗದ ಬುದ್ಧಿ...ಗೇಟಿನ ಹತ್ತಿರವೇ ರೋಡ್ ಗೆ ಅಡ್ಡವಾಗಿ ನಿಂತ್ಬಿಡ್ತು ...ಎಷ್ಟೇ ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೂ ಮುಷ್ಕರ ಕ್ಕೆ ನಿಂತಾಗೆ ನಿಂತಿತ್ತು ...ಏನ್ಮಾಡೋದು ರೋಡ್ ಗೆ ಅಡ್ಡ ನಿಂತಿದೆ ಇನ್ನು ಬೇರೆ ವೆಹಿಕಲ್ ಬಂದ್ರೆ ಅವರುಗಳ ಬಳಿ ಸಹಸ್ರಾರ್ಚನೆ ಕೇಳಬೇಕಾಗುತ್ತೆ ಅದ್ಕೆ ನಾನು ಕಾರ್ ಬದಿಯಲ್ಲಿ ಹಾಕಲೇ ಬೇಕು.....ಆಗ ಪಕ್ಕದ ಮನೆ ಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಾಲಿಯನ್ನ ಕರೆದೆ.....ಪಾಪ ಅವನು ಮಾಡುತ್ತಿರುವ ಕೆಲಸ ಬಿಟ್ಟು ಬಂದು ಕಾರ್ ತಳ್ಳಿ ಬದಿಗೆ ನಿಲ್ಲಿಸಲು ಸಹಾಯ ಮಾಡಿ ಅವನು ಅವರ ಮನೆಯ ಗೇಟಿನ ಒಳಕ್ಕೆ ಹೋದ...ಪಾಪ ಕರೆದ ತಕ್ಷಣ ಸಹಾಯಮಾಡಿದ್ದಕ್ಕೆ ಅವನು ಕೇಳದಿದ್ದರೂ ಅವನಿಗೆ ದುಡ್ಡು ಕೊಡೋಣ ಅನಿಸಿತು....ಎಷ್ಟೆಂದ್ರೂ ಪಾಪ ಕಷ್ಟ ಜೀವಿಗಳು ...ಅದಕ್ಕೆ ದುಡ್ಡು ಕೊಡಲು ನಾನು ಅವರ ಮನೆ ಗೇಟಿನ ಒಳಕ್ಕೆ ಹೋದೆ........ಅವರ ಮನೆಯಲ್ಲೋ ಎರಡು ಜರ್ಮನ್ ಶಫರ್ಡ್ ನಾಯಿಗಳಿವೆ....ಯಾವಾಗಲೂ ಕಟ್ಟಿರುತ್ತಿದ್ದ ನಾಯಿಗಳು ನನ್ನ ದುದ್ರ್ಧೈವಕ್ಕೆ ಬಿಟ್ಟುಕೊಂಡಿದ್ದವು.........ನನ್ನನ್ನು ನೋಡಿದ್ದೇ ಹಸಿದ ತೋಳಗಳಂತೆ ಎರಗಲು ದೊಡ್ಡದಾಗಿ ಬೊಗಳುತ್ತಾ ಬಂದೇಬಿಟ್ವು....ಏನು ಮಾಡಲು ತೋಚದಾಯಿತು...ಮನಸ್ಸು ಓಡು ಅಂತಿದ್ರೂ ......ಕಾಲುಗಳು ಮಾತ್ರ ಭೂಮಿಗೆ ಅಂಟಿಕೊಂಡಿವೆಯೇನೋ ಅನ್ನೋ ಹಾಗೆ ಒಂದಿಂಚೂ ಅಲ್ಲಾಡಲೆ ಇಲ್ಲ...ಓಡಿದರೆ ನಾನು ಅವುಗಳಿಗೆ ಆಹಾರ ಆಗೋದು ನಿಶ್ಚಿತ ಅನಿಸಿಹೋಯ್ತು...ಒಮ್ಮೊಮ್ಮೆ ಇಂತ ಸಂದರ್ಭದಲ್ಲೇ ನಮ್ಮ ಸಿಕ್ಸ್ತ್ ಸೆನ್ಸ್ ಕೆಲಸ ಮಾಡುತ್ತೋ ಏನೋ.........ಏನೇ ಬಂದರೂ ದೈರ್ಯದಿಂದ ಎದುರಿಸು ಅಂತ ನನ್ನ ಒಳಮನಸ್ಸು ಗಟ್ಟಿ ನಿರ್ಧಾರ ಮಾಡಿತ್ತು....ಅಷ್ಟರಲ್ಲೇ ಓಡಿಬಂದ ಈ ನಾಯಿಗಳಲ್ಲಿ ಒಂದು ಎರಡು ಕಾಲನ್ನೆತ್ತಿ ನನ್ನ ಭುಜದ ಮೇಲೆ ಇಟ್ಟಿತ್ತು...ಇನ್ನೊಂದು ನನ್ನ ಒಳ್ಳೆ ಉಗ್ರರನ್ನ ಪರೀಕ್ಷಿಸುವಂತೆ ನನ್ನ ಸುತ್ತ ಸುತ್ತ ತೊಡಗಿತು.....ನನಗೆ ಆ ಕ್ಷಣಕ್ಕೆ ಮೃತ್ಯು ದರ್ಶನವೇ ಆಗಿತ್ತು.ಕ್ಷಣದಲ್ಲೇ ಹೆಂಡತಿ ಕಳೆದುಕೊಂಡ ಗಂಡನ ದುಃಖ ತಪ್ತಮುಖ ಹಾಗೂ ಚಿಕ್ಕ ನನ್ನೆರಡು ಮಕ್ಕಳ ಅನಾಥವಾಗಿ ಅಳುತ್ತಿರುವ ಮುಖಗಳೆಲ್ಲ ಮನಸ್ಸಲ್ಲಿ ಬಂದು ಹೋದವು....ದೇವರೇ ನೀನೇ ದಿಕ್ಕು ಅಂತ ಮನಸ್ಸಲ್ಲೇ ಅಂದುಕೊಂಡೆ ....ಪವಾಡವೇನೋ ಅನ್ನುವಂತೆ ಕಚ್ಹುವದಕ್ಕೆ ಹೆಸರಾದ ಅವರ ನಾಯಿ ಕಚ್ಚುವ ಬದಲು ನನ್ನ ತುಟಿ,ಮುಖ ಎಲ್ಲ ನೆಕ್ಕುವದಕ್ಕೆ ಶುರು ಮಾಡಿತ್ತು.....ನನಗೋ ಒಮ್ಮೆ ಮುಖ ಒರೆಸಿಕೊಳ್ಳೋಣ ಅಂತ ..ಆದರೆ ಅಲ್ಲಾಡೋಕು ಹೆದರಿಕೆ ಆಗೋ ಸಂದರ್ಭ .....ಮನೆಯವರನ್ನ ಕೂಗೋಣ ಅನ್ನೋಕೂ ಆಗ್ತಾ ಇಲ್ಲ ಈ ನಾಯಿ ನನ್ನ ಮೇಲಿಟ್ಟ ಕಾಲನ್ನ ತೆಗೆಯುತ್ತಲೇ ಇಲ್ಲ....ಅಂತೂ ಆ ಮನೆಯ ಹುಡುಗ ಮಹಡಿಯಲ್ಲಿ ಕುಳಿತು ಓದುತ್ತಿದ್ದವ ನಾಯಿ ಯಾಕೆ ಬೊಗಳುತ್ತಿದೆ ಅಂತ ಕಿಡಕಿಯಿಂದ ಇಣುಕಿ ನೋಡಿ ಸಂದರ್ಭ ಅರ್ಥ ಆಗಿ ಓಡಿ ಬಂದು ಅವರ ನಾಯಿಗಳನ್ನ ಕರೆದು ಅಂತೂ ನನಗೆ ಜೀವಭಯದಿಂದ ಮುಕ್ತಿ ಕೊಟ್ಟ....ಆಮೇಲೆ ಅವನ ತಾಯಿ ಬಂದು...ಒಳಕ್ಕೆ ಕರೆದು...ನೀರು ಕೊಟ್ರು...ಸ್ವಲ್ಪ ಹೊತ್ತು ಮಾತಾಡಿದರು....ನಾಯಿ ಸಾಕಿದವರನ್ನ ಅಥವಾ ನಾಯಿ ಬಗ್ಗೆ ಕಾಳಜಿ ಇರುವವರನ್ನ ನಾಯಿ ಗುರುತಿಸುತ್ತದೆ.....ಕಚ್ಹೊಲ್ಲವಂತೆ ...ಹೀಗೆ ಅಂತೆ ಕಂತೆಗಳ ವಿಚಾರವನ್ನ ಅವರ ಜ್ನಾನಕ್ಕನುಗುಣವಾಗಿ ಬಿತ್ತರಿಸಿದರು...ಐದು ನಿಮಿಷ ಬಿಟ್ಟು ಸ್ವಲ್ಪ ಸಮಾಧಾನವಾದಾಗ ಅಲ್ಲಿಂದ ಜಾಗ ಕಾಲಿ ಮಾಡಿದ ನನಗೆ ಪುನರ್ಜನ್ಮ ಪಡೆದ ಸಂತೋಷ......ಆದರೆ ಒಂದಂತೂ ನಿಜ ಅನಿಸಿತ್ತು ನಾವು ಯಾವದೇ ಸಂದರ್ಭದಲ್ಲೂ ದೈರ್ಯ ಕಳೆದುಕೊಳ್ಳ ಬಾರದು....ದೈರ್ಯ ಮತ್ತು ದೃಢ ಆತ್ಮವಿಶ್ವಾಸ ನಮ್ಮಲ್ಲಿದ್ದರೆ ಎಂತಹ ಸಂದರ್ಭವನ್ನೂ ಎದುರಿಸಬಹುದು...
ನನ್ನ ಸೋಲಿನ .. ನಿಟ್ಟುಸಿರೇ ನಿನ್ನ ಗೆಲುವಾದರೆ
ನಾ ಯಾವಾಗಲೂ ಸೋಲುವೆ ಬೇಸರವಿಲ್ಲದೆ..
ಗೆಲುವು ನಿನ್ನದೇ ಆಗಿರಲಿ ...............................ಕೀಮ
ನನ್ನ ಕನಸಿನ ಮೊಗ್ಗುಗಳನ್ನೆಲ್ಲ 
ನಿರ್ವಂಚನೆಯಲಿ ನಿನ್ನ ಹೃದಯದಿ ಸುರಿದೆ 
ಹೂವಾಗಿ ಪೂಜೆಗೆ ಸಲ್ಲಿಸುವದು 
ಕಸವಾಗಿ ಬುಟ್ಟಿ ಸೇರಿಸುವದು 
ಎರಡೂ ನಿನಗೇ ಸೇರಿದ್ದು........ಕೀಮ
ಇದೊಂದು ಸಣ್ಣ ಕಥೆ.....ತುಂಬಾ ಜನ ಸೇರಿ ಎಲ್ಲೋ ಹೊರಟಿದ್ದರು....ನಡೆಯುತ್ತಾ ದಾರಿಯಲ್ಲಿ ಅವರಿಗೆ ದಣಿವಾಯಿತು ಆಲ್ಲೆ ಪಕ್ಕದಲ್ಲಿದ್ದ ಶಿವ ದೇವಸ್ತಾನದಲ್ಲಿ ವಿಶ್ರಮಿಸಲೆಂದು ದೇವಸ್ಥಾನದ ಒಳಕ್ಕೆ ಹೋಗುತ್ತಾರೆ....ಅಲ್ಲಿ ಶಿವನ ಮುಂದೆ ಒಂದು ದೊಡ್ಡ ನಂದಿ ವಿಗ್ರಹ ಇತ್ತು....ಒಬ್ಬನಿಗೆ ಅದನ್ನು ಮುಟ್ಟಿ ನೋಡುವ ಆಸೆ ಆಯ್ತು ..ಆ ನಂದಿ ವಿಗ್ರಹದ ಬಳಿ ಹೋಗಿ ಅದರ ಮೈ ದಡವುತ್ತ ಅದರ ಮೂಗಿನ ಹೊರಳೆಯಲ್ಲಿ ಕೈ ಇಡುತ್ತಾನೆ...ಅದರಲ್ಲಿ ಮೊದಲೇ ಸ್ಥಾಪಿತವಾದ ಒಂದು ಚೇಳು ಇವನ ಕೈಗೆ ಕಚ್ಚಿತು,..ಆಗ ಅವನು ಹಾ ಅಂತ ಕಿರಿಚಿದ ಮಲಗಿದ್ದ ಉಳಿದವರು ಏನಾಯ್ತು ಅಂತ ಕೇಳುತ್ತಾರೆ ....ಆಗ ಅವನಿ ತಕ್ಷಣ ಒಂದು ಯೋಚನೆ ಬರುತ್ತದೆ,...ತಾನೊಬ್ಬನೇ ಯಾಕೆ ನೋವು ಮಾಡಿಕೊಳ್ಳಬೇಕು ಉಳಿದವರಿಗೂ ನೋವಾಗಲೀ ಅನ್ನೋ ದುರಾಸೆ ಕಾಡುತ್ತೆ...ಅದಕ್ಕಾಗಿ ಅವನು ತಕ್ಷಣ ಮೊಗದಲ್ಲಿ ನಗು ತಂದುಕೊಂಡು ವ್ಹಾ ಈ ನಂದಿಯ ಮೂಗಲ್ಲಿ ಅದ್ಭುತ ಶಕ್ತಿಯಿದೆ ..ಕೈ ಇಟ್ಟರೆ ರೋಮಾಂಚನ ವಾಗುತ್ತೆ ಅನ್ನುತ್ತಾನೆ...ಆಗ ಉಳಿದವರು ಆಶ್ಚರ್ಯ ಕುತೂಹಲದಿಂದ ಅದನ್ನೇ ಅನುಸರಿಸುತ್ತಾರೆ.....ಹೀಗೆ ನಮ್ಮ ಸಮಾಜದಲ್ಲೂ ಕೂಡ ಎಷ್ಟೊಂದು ಮೌಡ್ಯಗಳು ಇಂತಹದ್ದೇ ತಳಹದಿಯಲ್ಲಿ ನಿಂತಿದೆ...ತಮಗೆ ಸಿಗದ್ದು ಬೇರೆಯವರಿಗೂ ಸಿಗಬಾರದೆಂಬ ಉದ್ದೇಶಕ್ಕೆ ಎಷ್ಟೊಂದು ಡಂಬಾಚಾರ ,ಕಟ್ಟುಪಾಡುಗಳನ್ನ ಹೇರಿದ್ದಾರೆ....ನಾವು ಅದನ್ನೇ ಕುರಿಮಂದೆಗಳಂತೆ ಅನುಸರಿಸುತ್ತ ಇದ್ದೀವಿ ಕೂಡ...ಯೋಚನಾ ಶಕ್ತಿ ಇದ್ದೂ ನಮ್ಮ ನಿರ್ಧಾರ ನಾವು ತೆಗೆದುಕೊಳ್ಳದಂತ ಪರಿಸ್ಥಿತಿಯಲ್ಲಿ...
ಅದೊಂದು ಕಾಲದಲಿ ಸಾವಿರ ಬಿಂಬದಲಿ ಚಂದವಾದವಳು 
ನಾನಾಗಿ..ಇಂದು ಸಾವಿರ ಬಿಂಬಗಳೆಲ್ಲ ಸುಂದರ 
ನಿನ್ನ ಬಿಂಬದ ಹೊರತು ಅನಿಸಿದಾಗ 
ನನ್ನ ಮನದಲ್ಲಿ ಜತನದಲಿ ಕಾಯ್ದಿರಿಸಿದ 
ನಿನ್ನ ಹೆಸರನ್ನು ಅಳಿಸುವ ಕಾಲ ಬಂದಿದೆ ಎಂದೇ ಅರ್ಥ..
ಆಗಲಿ ನಿನ್ನಿಷ್ಟವೇ ನನ್ನದು ಎಂದು ನೋವ ನುಂಗಿ
ಸ್ವೀಕರಿಸುವೆ ನಿರ್ವಂಚನೆಯ ಪ್ರೀತಿಗೆ
ನೀ ಕೊಟ್ಟ ಕಾಣಿಕೆ ಇದೆಂದು.................................ಕೀಮ
.