Friday, 26 July 2013

ನೀನಿಲ್ಲದ ಆ.... ದಿನ ...

ರವಿಯು ಬಾನಲಿ ಜಾರುತಿರಲು 
ನಿಶೆಯು ತಾನು ತೆವಳುತಿರಲು 
ಬಾಡಿ ಮುದುಡಿದ ನೊಂದ ಮನಕೆ 
ನಿನ್ನ ಕರೆಯೇ ಮನದಿ ಬೆಳಗೊ ನಂದಾದೀಪವು

ಶಶಿಯು ನಭದಿ ನಗುತಲಿರಲು 
ಇರುಳಲಿ ಚಲ್ಲೆ ಬೆಳದಿಂಗಳ ಹಾಲು
ಏಕಾಂತದಿ ನಿಂತು ಮೊರೆವ ಹೃದಯಕೆ 
ನಿನ್ನ ಸಂದೇಶ ತಂತು ಪ್ರೇಮದಾ ಹೊನಲು

ಇಳೆಯ ಮಳೆಯ ಸರಸದಲ್ಲಿ
ಜಗವೆ ನಡುಗಿರೆ ಕೊರೆವ ಚಳಿಗೆ
ಹೆದರಿ ನಡುಗಿ ಬಡಿವ ಹೃದಯಕೆ
ನಿನ್ನ ನೆನಪೆ ಕಂಬಳಿಯಾಯ್ತು ಬೆಚ್ಚಗಿರಿಸಲು ಲಾಲಿ ಹಾಡಲು.

Sunday, 14 July 2013

ಮೇಲು ಕೀಳು

ಮೇಲು ಕೀಳೆಂಬ ಜಾತಿ ನೀತಿ
ಹಣಕ್ಯಾಕಿಲ್ಲ ಜಗದಲ್ಲಿ
ಕೀಳ್ಜಾತಿಯವ ಅಸ್ಪ್ರಶ್ಯನಾದರೆ
ಅವ ಮುಟ್ಟಿದ ಹಣಕ್ಕಿಲ್ಲವೇ ಈ ನೀತಿ

ಕೆಳವರ್ಗದವ ನಿಲ್ಲಬೇಕು
ಹೊಸ್ತಿಲಿಂದ ಹೊರಗೆ
ಅದೇ ಅವ ಕೊಟ್ಟ ಹಣ ಮಾತ್ರ
ಬರಬಹುದೇ ಒಳಗೆ

ಕಿಳ್ಜಾತಿಯ ಒಳ ಬಂದರೆ
ಆಗುವದವಗೆ  ಕಪಾಳ ಮೋಕ್ಷ
ಅವ ತಂದ ಹಣವಾದರೆ
ಅದುವೇ ಲಕ್ಷ್ಮೀ ಕಟಾಕ್ಷ

ಮೇಲ್ಜಾತಿ ಕೀಳ್ಜಾತಿ ಎನ್ನುವಾ
ಬೇದವೇಕೆ ಹುಟ್ಟಿನಲ್ಲಿ 
ಬುದ್ಧಿ
ನಡತೆಯಲಿ ಉತ್ತಮನೆ
ಮೇಲ್ಜಾತಿ ಯಲ್ಲವೇ

ಎಲ್ಲರ ಮೈಯಲ್ಲೂ ಹರಿವುದೊಂದೇ
ಕೆಂಪುರಕ್ತ
ಇದನರಿತ ಒಗ್ಗಟ್ಟಿನ ಬಾಳ್ವೆಯೇ
ಜಗದಲ್ಲಿ ಸೂಕ್ತ.

Friday, 12 July 2013


ನಿವೇದನೆ

ನಿನ್ನ ಕಾಣುವ ತವಕಕೆ
ನನ್ನ ಮನ ಮೇಳೈಸಿರಲು
ಕಂಡರೆಲ್ಲಿ ಸೋಲುವೆನೆಂಬ ಭಯ
ನನ್ನ ಹೃದಯವ ಕಾಡಿಹುದು

ಬಿಟ್ಟೋಡಲು ನಾ ದೂರ ದೂರ
ತಿರುಗಿ ನೋಡುವದದು
ಆಸೆಯಲಿ ಹುಚ್ಚು ಮನ
ಆಲಿಸಲು ನಿನ್ನ ಕರೆಯ ಮೊರೆಯ

ಮರೆಯ ಬೇಕೆನ್ನುವದುನಿರ್ಧಾರ
ಆದರಲ್ಲಿಯೂ ನಿನ್ನದೇ ಕಾರುಭಾರ
ಅಂತೂ ಗೆದ್ದೆನೆಂಬ ಸಮಯದಲಿ
ನಗುವದದು ನಿನ್ನ ಮುಖ ನೇತ್ರದಾಳದಲಿ

ಸೋಲೊಪ್ಪದಾ ಮನಕೆ ಗೆಲುವು ಮರಿಚಿಕೆಯಾಗೆ
ಹೊಂದಾಣಿಕೆಯೊಂದೇ ಉಳಿವ ದಾರಿ
ನೀನಲ್ಲೇ ಇರು ನಾನಿಲ್ಲೇ ಇರುವೆ
ಅರಳಿ ನಗುತಿರಲೆಂದು ಶುಭ್ರತೆಯ ಸ್ನೇಹದಾ ಹೂವು

Wednesday, 3 July 2013

ಬದುಕು..

ಬದುಕು..
ಹಾಯಿ ದೋಣಿಲಿ ಕುಳಿತ 
ನಿನದೆತ್ತಣಾ ಪಯಣ 
ಗಾಳಿ ಬಂದಕಡೆ ಸಾಗು 
ವ್ಯರ್ಥವದು ವಿಲೋಮ ಯತ್ನ

ಜೀವ(ನ)ದ ಗೆಳೆಯನಿಗೆ...

ಜೀವ(ನ)ದ ಗೆಳೆಯನಿಗೆ...

ಇಲ್ಲಿ ನನದೇನಿಲ್ಲ ಗೆಳೆಯಾ 
ಎಲ್ಲವೂ ನಿನ್ನದೆ
ನೀ ಕಲಿಸಿದ್ದೆ ..

ನಿನ್ನದು ಆಮೆಯಾ ವೇಗ 
ನಾನಾದರೋ ಸುನಾಮಿ
ವ್ಯತ್ಯಾಸವಿಷ್ಟೇ
ನೀ...ತಡೆಯಬೇಕಷ್ಟೆ 

ನಿನ್ನಿತು ಕೋಪ, ನನ್ನಲ್ಲಿ ಜ್ವಾಲಾಮುಖಿ
ನಿನ್ನ ಹನಿ ಕಾಳಜಿ ,ನನ್ನಲ್ಲಿ ಸಾಗರ
ನಿನ್ನ ಚೂರು ಕರುಣೆ, ನಾನು ಮಮತಾಮಯಿ
ನಿನ್ನ ಹಿಡಿ ಪ್ರೀತಿಗೆ , ನನ್ನದೆಲ್ಲವೂ ಸಮರ್ಪಣೆ

ಚಿಂತಿಸದಿರು ಗೆಳೆಯಾ ಬದಲಾವಣೆ ಹಾದಿಯಾ
ನಿನ್ನೊಲವಿಗುಂಟು ಆ ಶಕ್ತಿ ಎಂಬುದನ ಮರೆತೆಯಾ
ಬೆಳದಿಂಗಳನೇ ಸುರಿದು ತೋರೆಯಾಗಿ ಹರಿಯುವೆ
ನಿನ್ನ ಜೋತೆಜೋತೆಯಲೆ,ನನ್ನುಸಿರಿರುವ ವರೆಗೆ

ಜೀವನ

ಜೀವನ....
ಇದ್ದು ಗೆದ್ದವರಿಲ್ಲ 
ಎದ್ದು ಹೋದವರೇ ಎಲ್ಲ 
ಅಳಿವು ಉಳಿವು ನಮದಲ್ಲ 
ಹುಟ್ಟಿದಾಗಲೇ ಸಾವಿನ ಗುಲಾಮರೆಲ್ಲ
..