Saturday, 21 July 2012


ನೆನಪು
ನೆನಪಿನಾಗೂಡಲ್ಲಿ ಬಚ್ಚಿಟ್ಟು ಸಲಹುತಿಹೆ
ಆಗಾಗ ತೆಗೆದೊರೆಸೆ ಕೋಟಿ ಪ್ರಭೆಯು
ಬಿಚ್ಚಿಡದೆ ಮುಚ್ಚಿಟ್ಟ ಭಾವಗಳು ಹಲವು
ನೆನಪುಗಳಾಗಿ ಚುಚ್ಚಿ ಕಣ್ಣಲ್ಲಿ ನೀರು

ಬದುಕೆಂಬ ಆಟದಲಿ ಆಟಗಾರರು ನಾವು
ಎಸೆದರು ದಾಳವ ಅವರವರ ಹಿತದಂತೆ
ತಿರುಗಿನೋಡದೆ ಮುನ್ನುಗ್ಗ ಬೇಕಾಯ್ತು
ತಲೆಬಾಗಿಸಿದ ಕುರಿಮಂದೆಯಂತೆ

ಸಮರ್ಪಿತವಾಯ್ತು ಇನ್ನಾರಿಗೋ ಜೀವಿತವು
ಮಂಜಂತೆ ಕರಗೊಯ್ತು ಮನದ ಇಂಗಿತವು
ನೋವು ನಲಿವಿನ ಸಂತೆಯಲಿ ನಿಂತು
ಬಾರದ ನಿನ್ನ ನಿರೀಕ್ಷೆಯು.

ಬರಲಾರೆ ನೀನು ಕರೆಯಲಾರೆ ನಾನು
ಬಂಧಿಸಿಹುದು ಚೌಕಟ್ಟಿನೊಳಗೆ ಸಂಭಂದವು
ಆದರೇನಂತೆ ಹಾರೈಸುವೆ ಎದೆತುಂಬಿ
ಎಲ್ಲಾದರೂ ನೀ ಸುಖವಾಗಿರು

Tuesday, 17 July 2012


ಆಶಯ

ಸೆಳೆಯುತಿರುವಳು  ತನ್ನ ಮಾಯಾಪಾಶದಿ
ಮುಗ್ದ ಜನತೆಯನ್ನು
ಬಂಧಿಸುತಿಹಳು ಹಲವು ರೂಪದಿ
ಮೋಹದಾ ಬಲೆಯಲಿ
ಒಮ್ಮೆ ಸಿಕ್ಕರೆ ಸಾಕು ಬಿಡಳಿ ಮೋಹನಾಂಗಿ
ಸುತ್ತಿ ಮೈ ಮರೆಸುವಳು ನಶೆಯಲ್ಲಿ

ಅಡಿಯಿಟ್ಟರೆ ಸಾಕು ನೀ ಭಂದಿ ಚಕ್ರವ್ಯೂಹದಲ್ಲಿ
ಕಡಿದೇ ಬಿಡುವಳು ನಿನ್ನ ಸಂಭಂದ ಸಮಾಜದಲ್ಲಿ
ಬರಬೇಕೆಂದರೂ ಬರಲಾರೆ ನೀ ಹೊರಕೆ
ದಾಸಾನು ದಾಸ ನೀ ಅವಳ ಪಾದಕೆ

ದಿನದಲೆಷ್ಟೋ ಜನರು ಮರುಳು ಇವಳ ಸೆಳೆತಕೆ
ಒಂದೊಂದೆ ಅಡಿಯಿಡುವರು ತಮ್ಮದೇ ಅಧಃಪತನಕೆ
ಅವತಾರವೋ ಇವಳಿಗೆ ಹಲವಾರು
ಹಿಂದೆ ಹೋದವರಿಗೆ ಕನಸಾಗುವದು ಸುಂದರ ಬಾಳು

ಕ್ಷಣದಲ್ಲೇ ಆವರಿಸುವಳು ಇಡಿಯಾಗಿ ಇವಳು
ವಿಧಿಯಿಲ್ಲದೆ ಆಗುವೆ ಅವಳ ಸೆರೆಯಾಳು
ಬೆಳೆಸುವಳು ನಿನ್ನಲ್ಲಿ ಬಿಟ್ಟಿರಲಾರದ ನಂಟು
ತೆರಲೇ ಬೇಕು ನೀ ಇದಕೆ ಆಯುಷ್ಯದ ಘಂಟು

ಎಚ್ಚರಾ ಮನುಜ ಸೇರೆಯಾಗದಿರು ಇವಳ ಮೋಹದಲಿ
ಸುಂದರ ಸಮಾಜದ ಶಿಲ್ಪಿಯಾಗು ಬಾಳಲಿ

Thursday, 5 July 2012


ಭಗ್ನ ಕನಸು
ನೂರು ಕನಸಿನ ಮೊಗ್ಗ  ಹೊತ್ತು ಬಂದೆ
ನಿನ್ನ ಪೂಜೆಗೆ
ಒಂದೂ ಅರಳದೆ ಹೊಸಕಿಹೊಯಿತಲ್ಲ
ನಿನ್ನ ಕಾಲ ಕೆಳಗೆ
ಮನಸಲ್ಲಿ ಹೆಣೆದಿಟ್ಟ ಕನಸುಗಳು ನೂರು
ಚಿಲಿಪಿಲಿ ಅನ್ನುತ ಕಟ್ಟಿದವು ಪುಟ್ಟ ಗೂಡು
ಮೊಟ್ಟೆ ಒಡೆದು ಮರಿಯಾಗಿ ಗರಿಗೆದರ ಬೇಕಿತ್ತು
ಆದರದಕೆ ಬಿತ್ತು  ಕಾಳ್ಗಿಚ್ಚು
ಇಂದು ನಿಂತಿದೆ ಬರಿ ಅವಶೇಷವು
 ಸಾರುತಿದೆ ಗತ ಇತಿಹಾಸವು


ಹಣತೆ
ಒಲವು ತುಂಬಿದ ನಿನ್ನ
ಆ ಎರಡು ಕಂಗಳು ನನ್ನ
ಬಾಳಿನ ದಾರಿ ತೋರುವ
ಎರಡು ಹಣತೆಗಳು  ಇನಿಯಾ
ಮುಸುಕುವಾ ಕತ್ತಲೆಯ ಓಡಿಸಿ
ಪ್ರೀತಿಯೆಂಬ ಬೆಳಕ ಚೆಲ್ಲುತ
ನಂದಾದೀಪದಂತೆ ಬೆಳಗುತಿರಲಿ
ಅನವರತಾ.....

Tuesday, 3 July 2012


ನೆನಪೆ ನೀ ಯಾಕೆ ಹೀಗೆ

ಮನಸೆಂಬ ಕಡಲಲ್ಲಿ ಅಲೆಯಂತೆ ಉದ್ಭವಿಸಿ
ಸರದಿಯಲಿ ಬಂದು
ಹೃದಯಕೆ ನೀ ಅಪ್ಪಳಿಸುವೆ

ಮರಳಂತೆ ನಾ ನಿನ್ನನೆ ಅನುಸರಿಸೆ
ತಿರುಗಿ ನೂಕುವೆ ಯಾಕೆ
ವಾಸ್ತವದ ದಡಕೆ

ದಡದಲುಂಟು ನೂರಾರು ಚಿಪ್ಪುಗಳು
ಒಂದೊಂದಕೂ ಒಂದೊಂದು ಕಥೆಯು
ನೋವು ಸಂತಸದ ಹಲವು ಮುಖವು

ಸಿಹಿಕಹಿಗಳ ಹದವಾದ ಮಿಶ್ರಣದಿ
ಮಣಿಮಾಡಿ ಪೋಣಿಸಲು
ಬದುಕು ಹೊಳೆಯುವ ಸುಂದರ ಮಾಲೆಯು  


ಹೂಗಳು
ಬಾಳೆಂಬ ತೋಟದಲಿ
ಅರಳಿದಾ ಹೂಗಳು ನಾವು
ಬಿಸಿಲಿಗೆ ಬಾಡುವೆವೋ
ಗಾಳಿಗೆ ತೂಗುವೆವೋ
ತಿಳಿಯದೆ ಭವಿಷ್ಯಕೆ ಮುಖ ಮಾಡಿ ನಿಂತಿಹೆವು

ಅರಳಿ ನಗುತಿರೆ ತೋಟವದು ಚಂದ
ದುಂಬಿಗೂ ಆನಂದ
ಸೋತು ಬಸವಳಿಯೇ ಮೌನದ ಛಾಯೆ
ಗಿಡದ ಬುಡಕಿಸ್ಟು ಕಸ ಗೊಬ್ಬರ

ಹೆಣ್ಣಿನಾ ಮುಡಿಯೇರೆ ಮೆರೆವುದು ಗರ್ವ
ಸಂತಸದ ಸಂಭ್ರಮಕೆ ನಾ ಪ್ರತೀಕ
ದೇವರಾ ಪೂಜೆಗೆ ಉಪಯೋಗವಾಗೆ
ಬದುಕಿದು ಸಾರ್ಥಕ  ಪರಮಾರ್ಥಕ