Monday 10 November 2014

ಧೈರ್ಯಂ ಸರ್ವತ್ರ ಸಾಧನಂ ಅನ್ನೋದು ಕೆಲವುಸಲ ಎಷ್ಟೊಂದು ನಿಜ ಅನಿಸುತ್ತೆ...ಆವತ್ತಿನ ದಿನ ಇನ್ನೂ ಕಣ್ಣಿಗೆ ಕಟ್ಟಿದಂತಿದೆ....ಆಗಿನ್ನೂ ಡ್ರೈವಿಂಗ್ ಕಲಿತ ಹೊಸದು...ನನ್ನದು ಮಾರುತಿ 800 ಆಗಿತ್ತು...ನನ್ನ ಯಜಮಾನರು ಸೆಕೆಂಡ್ ಹ್ಯಾಂಡ್ ಕಾರ್ ಸಾಕು ಸ್ವಲ್ಪ ಸಮಯ ...ಕಲಿತ ಹೊಸದರಲ್ಲಿ ಅಲ್ಲಿ ಇಲ್ಲಿ ಗುದ್ದಿ ಹಾಳಾಗುತ್ತೆ ಅಂತ ಹೇಳಿದ್ದರು...ಅದಕ್ಕಿಂತ ಹೆಚ್ಹಾಗಿ ನನ್ನ ಡ್ರೈವಿಂಗ್ ಸ್ಟೈಲ್ ಗೊತ್ತಿದ್ದ ಅವರು ಇವಳಿಗೆ ಈಗಲೆ ಹೊಸ ಕಾರ್ ಕೊಡಿಸಿದರೆ ದಿನ ತಾನು ಪೋಲಿಸ್ ಸ್ಟೇಷನ್ ಸುತ್ತೋ ಪ್ರಸಂಗ ಬರುತ್ತೆ ಅಂತ ಅರಿತಿದ್ದರು...ನನಗೋ ಡ್ರೈವಿಂಗ್ ಕಲಿತ ಹೊಸದು ಯಾವುದಾದರೇನು ಒಟ್ಟಾರೆ ಕಾರ್ ಸಿಕ್ತಲ್ಲ ಅನ್ನೋ ಕುಶಿ....ಪಾಪ ಆ ಕಾರ್ ಗೂ ಒಡತಿಯ ಮನಸ್ಸು ತಿಳಿದಿತ್ತೋ ಏನೋ ಆತುರಗಾರನಿಗೆ ಬುದ್ಧಿ ಮಟ್ಟ ಅಂತ ... ತಾನೂ ಒಡತಿಯ ವೇಗಕ್ಕೆ ಓಡಿದರೆ ಈ ಒಡತಿ ತನ್ನನ್ನ ಗುಜರಿಗೆ ಕಳಿಸುತ್ತಾಳೆ ಅಂತ... ಅದಕ್ಕೆ ಅದು ಇದ್ದಕ್ಕಿದ್ದಲ್ಲೇ ಆಗಾಗ ಎಲ್ಲೆಂದರಲ್ಲಿ ನಿಂತು ಸ್ಲೋ ಮಂತ್ರ ಉಪದೇಶಿಸುತ್ತಿತ್ತು.....ಆವತ್ತು ಹಾಗೆ ಆಯ್ತು...ಎಲ್ಲೋ ಬೇಗ ಹೋಗೋಣ ಅಂತ ಹೊರಟೆ ಈ ಕಾರಿನದ್ದೋ ಬದಲಾಗದ ಬುದ್ಧಿ...ಗೇಟಿನ ಹತ್ತಿರವೇ ರೋಡ್ ಗೆ ಅಡ್ಡವಾಗಿ ನಿಂತ್ಬಿಡ್ತು ...ಎಷ್ಟೇ ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೂ ಮುಷ್ಕರ ಕ್ಕೆ ನಿಂತಾಗೆ ನಿಂತಿತ್ತು ...ಏನ್ಮಾಡೋದು ರೋಡ್ ಗೆ ಅಡ್ಡ ನಿಂತಿದೆ ಇನ್ನು ಬೇರೆ ವೆಹಿಕಲ್ ಬಂದ್ರೆ ಅವರುಗಳ ಬಳಿ ಸಹಸ್ರಾರ್ಚನೆ ಕೇಳಬೇಕಾಗುತ್ತೆ ಅದ್ಕೆ ನಾನು ಕಾರ್ ಬದಿಯಲ್ಲಿ ಹಾಕಲೇ ಬೇಕು.....ಆಗ ಪಕ್ಕದ ಮನೆ ಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಾಲಿಯನ್ನ ಕರೆದೆ.....ಪಾಪ ಅವನು ಮಾಡುತ್ತಿರುವ ಕೆಲಸ ಬಿಟ್ಟು ಬಂದು ಕಾರ್ ತಳ್ಳಿ ಬದಿಗೆ ನಿಲ್ಲಿಸಲು ಸಹಾಯ ಮಾಡಿ ಅವನು ಅವರ ಮನೆಯ ಗೇಟಿನ ಒಳಕ್ಕೆ ಹೋದ...ಪಾಪ ಕರೆದ ತಕ್ಷಣ ಸಹಾಯಮಾಡಿದ್ದಕ್ಕೆ ಅವನು ಕೇಳದಿದ್ದರೂ ಅವನಿಗೆ ದುಡ್ಡು ಕೊಡೋಣ ಅನಿಸಿತು....ಎಷ್ಟೆಂದ್ರೂ ಪಾಪ ಕಷ್ಟ ಜೀವಿಗಳು ...ಅದಕ್ಕೆ ದುಡ್ಡು ಕೊಡಲು ನಾನು ಅವರ ಮನೆ ಗೇಟಿನ ಒಳಕ್ಕೆ ಹೋದೆ........ಅವರ ಮನೆಯಲ್ಲೋ ಎರಡು ಜರ್ಮನ್ ಶಫರ್ಡ್ ನಾಯಿಗಳಿವೆ....ಯಾವಾಗಲೂ ಕಟ್ಟಿರುತ್ತಿದ್ದ ನಾಯಿಗಳು ನನ್ನ ದುದ್ರ್ಧೈವಕ್ಕೆ ಬಿಟ್ಟುಕೊಂಡಿದ್ದವು.........ನನ್ನನ್ನು ನೋಡಿದ್ದೇ ಹಸಿದ ತೋಳಗಳಂತೆ ಎರಗಲು ದೊಡ್ಡದಾಗಿ ಬೊಗಳುತ್ತಾ ಬಂದೇಬಿಟ್ವು....ಏನು ಮಾಡಲು ತೋಚದಾಯಿತು...ಮನಸ್ಸು ಓಡು ಅಂತಿದ್ರೂ ......ಕಾಲುಗಳು ಮಾತ್ರ ಭೂಮಿಗೆ ಅಂಟಿಕೊಂಡಿವೆಯೇನೋ ಅನ್ನೋ ಹಾಗೆ ಒಂದಿಂಚೂ ಅಲ್ಲಾಡಲೆ ಇಲ್ಲ...ಓಡಿದರೆ ನಾನು ಅವುಗಳಿಗೆ ಆಹಾರ ಆಗೋದು ನಿಶ್ಚಿತ ಅನಿಸಿಹೋಯ್ತು...ಒಮ್ಮೊಮ್ಮೆ ಇಂತ ಸಂದರ್ಭದಲ್ಲೇ ನಮ್ಮ ಸಿಕ್ಸ್ತ್ ಸೆನ್ಸ್ ಕೆಲಸ ಮಾಡುತ್ತೋ ಏನೋ.........ಏನೇ ಬಂದರೂ ದೈರ್ಯದಿಂದ ಎದುರಿಸು ಅಂತ ನನ್ನ ಒಳಮನಸ್ಸು ಗಟ್ಟಿ ನಿರ್ಧಾರ ಮಾಡಿತ್ತು....ಅಷ್ಟರಲ್ಲೇ ಓಡಿಬಂದ ಈ ನಾಯಿಗಳಲ್ಲಿ ಒಂದು ಎರಡು ಕಾಲನ್ನೆತ್ತಿ ನನ್ನ ಭುಜದ ಮೇಲೆ ಇಟ್ಟಿತ್ತು...ಇನ್ನೊಂದು ನನ್ನ ಒಳ್ಳೆ ಉಗ್ರರನ್ನ ಪರೀಕ್ಷಿಸುವಂತೆ ನನ್ನ ಸುತ್ತ ಸುತ್ತ ತೊಡಗಿತು.....ನನಗೆ ಆ ಕ್ಷಣಕ್ಕೆ ಮೃತ್ಯು ದರ್ಶನವೇ ಆಗಿತ್ತು.ಕ್ಷಣದಲ್ಲೇ ಹೆಂಡತಿ ಕಳೆದುಕೊಂಡ ಗಂಡನ ದುಃಖ ತಪ್ತಮುಖ ಹಾಗೂ ಚಿಕ್ಕ ನನ್ನೆರಡು ಮಕ್ಕಳ ಅನಾಥವಾಗಿ ಅಳುತ್ತಿರುವ ಮುಖಗಳೆಲ್ಲ ಮನಸ್ಸಲ್ಲಿ ಬಂದು ಹೋದವು....ದೇವರೇ ನೀನೇ ದಿಕ್ಕು ಅಂತ ಮನಸ್ಸಲ್ಲೇ ಅಂದುಕೊಂಡೆ ....ಪವಾಡವೇನೋ ಅನ್ನುವಂತೆ ಕಚ್ಹುವದಕ್ಕೆ ಹೆಸರಾದ ಅವರ ನಾಯಿ ಕಚ್ಚುವ ಬದಲು ನನ್ನ ತುಟಿ,ಮುಖ ಎಲ್ಲ ನೆಕ್ಕುವದಕ್ಕೆ ಶುರು ಮಾಡಿತ್ತು.....ನನಗೋ ಒಮ್ಮೆ ಮುಖ ಒರೆಸಿಕೊಳ್ಳೋಣ ಅಂತ ..ಆದರೆ ಅಲ್ಲಾಡೋಕು ಹೆದರಿಕೆ ಆಗೋ ಸಂದರ್ಭ .....ಮನೆಯವರನ್ನ ಕೂಗೋಣ ಅನ್ನೋಕೂ ಆಗ್ತಾ ಇಲ್ಲ ಈ ನಾಯಿ ನನ್ನ ಮೇಲಿಟ್ಟ ಕಾಲನ್ನ ತೆಗೆಯುತ್ತಲೇ ಇಲ್ಲ....ಅಂತೂ ಆ ಮನೆಯ ಹುಡುಗ ಮಹಡಿಯಲ್ಲಿ ಕುಳಿತು ಓದುತ್ತಿದ್ದವ ನಾಯಿ ಯಾಕೆ ಬೊಗಳುತ್ತಿದೆ ಅಂತ ಕಿಡಕಿಯಿಂದ ಇಣುಕಿ ನೋಡಿ ಸಂದರ್ಭ ಅರ್ಥ ಆಗಿ ಓಡಿ ಬಂದು ಅವರ ನಾಯಿಗಳನ್ನ ಕರೆದು ಅಂತೂ ನನಗೆ ಜೀವಭಯದಿಂದ ಮುಕ್ತಿ ಕೊಟ್ಟ....ಆಮೇಲೆ ಅವನ ತಾಯಿ ಬಂದು...ಒಳಕ್ಕೆ ಕರೆದು...ನೀರು ಕೊಟ್ರು...ಸ್ವಲ್ಪ ಹೊತ್ತು ಮಾತಾಡಿದರು....ನಾಯಿ ಸಾಕಿದವರನ್ನ ಅಥವಾ ನಾಯಿ ಬಗ್ಗೆ ಕಾಳಜಿ ಇರುವವರನ್ನ ನಾಯಿ ಗುರುತಿಸುತ್ತದೆ.....ಕಚ್ಹೊಲ್ಲವಂತೆ ...ಹೀಗೆ ಅಂತೆ ಕಂತೆಗಳ ವಿಚಾರವನ್ನ ಅವರ ಜ್ನಾನಕ್ಕನುಗುಣವಾಗಿ ಬಿತ್ತರಿಸಿದರು...ಐದು ನಿಮಿಷ ಬಿಟ್ಟು ಸ್ವಲ್ಪ ಸಮಾಧಾನವಾದಾಗ ಅಲ್ಲಿಂದ ಜಾಗ ಕಾಲಿ ಮಾಡಿದ ನನಗೆ ಪುನರ್ಜನ್ಮ ಪಡೆದ ಸಂತೋಷ......ಆದರೆ ಒಂದಂತೂ ನಿಜ ಅನಿಸಿತ್ತು ನಾವು ಯಾವದೇ ಸಂದರ್ಭದಲ್ಲೂ ದೈರ್ಯ ಕಳೆದುಕೊಳ್ಳ ಬಾರದು....ದೈರ್ಯ ಮತ್ತು ದೃಢ ಆತ್ಮವಿಶ್ವಾಸ ನಮ್ಮಲ್ಲಿದ್ದರೆ ಎಂತಹ ಸಂದರ್ಭವನ್ನೂ ಎದುರಿಸಬಹುದು...

2 comments:

  1. ಇಂತದೇ ನಾಯಿ ಪಾಡು ನನಗೂ ಒಮ್ಮೆ ಆಗಿತು. ಹೃದಯವೇ ಬಾಯಿಗೆ ಬಂದಿತ್ತು!

    ReplyDelete
  2. ಆದರೆ ಎಂತ ಪರಿಸ್ಥಿತಿಯನ್ನೂ ಎದುರಿಸಲು ಧೈರ್ಯ ಜೊತೆಗಿರಬೇಕು....ಸರ್..

    ReplyDelete