Monday 6 October 2014

ಅಂತರ್ಜಾಲದ ಹುಡುಗ

http://www.panjumagazine.com/?p=664
ಭಾವನ ಊಟಮುಗಿಸಿ ವಿಶ್ರಾಂತಿಗಾಗಿ ಸ್ವಲ್ಪ ಹೊತ್ತು ಮಲಗೋಣ ಎಂದು ಸೋಫಾದಲ್ಲಿ ಇನ್ನೇನು ಮಲಗಬೇಕು ಅಷ್ಟರಲ್ಲಿ ಅವಳ ಮೊಬೈಲ್ ಗೆ ಟಿನ್ ಟಿನ್ ಎಂದು ಸಂದೇಶ ಬಂತು, ಎದ್ದು ನೋಡಿದಾಗ  ಹಾಯ್ ಅಕ್ಕಾ ಹೇಗಿದ್ದೀಯ,ಈ ಬದನಸೀಬ್ ತಮ್ಮನ ಮರೆತುಬಿಟ್ಟೆಯ ಎನ್ನುವ ಸಂದೇಶ ನೋಡಿ ಅವಳಲ್ಲಿ ಬೇಸರ, ಸಂತೋಷ, ಆತಂಕದ ಭಾವನೆಗಳು ಒಮ್ಮೆಲೆ ನುಗ್ಗಿ ಕರುಳಲ್ಲಿ ಚುಚ್ಚಿದ ಅನುಭವ. ನಿಧಾನವಾಗಿ ಕಣ್ಣಲ್ಲಿ ನೀರಿನ ಹನಿಗಳು ತೊಟ್ಟಿಕ್ಕಿದವು. ಒಮ್ಮೆ ನಿಟ್ಟುಸಿರಿಟ್ಟಳು. ಮನಸ್ಸು ನಿದ್ದೆ ಮರೆತು ನೆನಪಿನ ಕುದುರೆಯ ಬೆನ್ನೇರಿತ್ತು.
ಆಗಿನ್ನು ಹೊಸತಾಗಿ ಅಂತರ್ಜಾಲದಲ್ಲಿ ಮುಖಪುಸ್ತಕ (FB) ಖಾತೆ ತೆಗೆದ ಸಮಯ. ಗಂಡ ಆಫೀಸ್, ಮಕ್ಕಳು ಸ್ಕೂಲ್ ಅಂತ ಹೋದಾಗ ಹೆಚ್ಚಿನ ಸಮಯವೆಲ್ಲ ಕಂಪ್ಯೂಟರ್ ಮುಂದೆ ಕಳೆಯುತ್ತಿದ್ದಳು ಭಾವನ. ಅಂತಹ ಸಮಯದಲ್ಲಿ ಪರಿಚಯವಾದವನೇ ಕುಮಾರ. ಅವಳಿಗಿಂತ ವಯಸ್ಸಿನಲ್ಲಿ ೬-೮ ವರ್ಷ ಚಿಕ್ಕವನು. ಮುಖದಲ್ಲಿ ಮುಗ್ಧತೆ ತುಂಬಿದ ಗುಂಗುರು ಕೂದಲಿನ ಸುಂದರ ಹುಡುಗ. ಮೇಡಂ ಎಂದು ಸಂಭೋದಿಸುತ್ತ ಬೆಂಬಿಡದೇ ಪರಿಚಯವಾದ ಈತ ದಿನಕಳೆದಂತೆ ಹತ್ತಿರವಾಗಿ  ಅಕ್ಕಾ ಎಂದು ಕರೆಯಲು ಪ್ರಾರಂಭಿಸಿದ. ಭಾವನಾಳೋ ಹೆಸರಿಗೆ ತಕ್ಕಂತೆ ಭಾವನಾ ಜೀವಿ. ಮೃದು ಸ್ವಭಾವದ ಶುದ್ಧ ಮನಸ್ಸಿನ ಸುಂದರ ಮಹಿಳೆ. ಅಕ್ಕಾ ಎಂದು ಕರೆದಾಗ ತನಗಿಲ್ಲದ ತಮ್ಮನನ್ನು ದೇವರೇ ಪರಿಚಯಿಸಿದ ಎಂದು ಸಂಭ್ರಮ ಪಟ್ಟಳು. ಹೆಂಗಸರಿಗೇ ಕರುಣೆ ಜಾಸ್ತಿ ಅದರಲ್ಲೂ ಅಕ್ಕಾ, ಅಮ್ಮಾ ಅಂತೆಲ್ಲ ಕರೆದಾಗ ಕರಗಿ ನೀರಾಗೋದು ಹೆಂಗಸರ ದುರ್ಬಲತೆ. ಕುಮಾರ ಕೂಡ ಇವಳಿಗೆ ಇಷ್ಟವಾಗುವ ರೀತಿಯಲ್ಲೇ ಮಾತನಾಡುತ್ತ ಅಕ್ಕನ ಮನಸ್ಸಲ್ಲಿ ತನ್ನ ಸ್ಥಳ ಭದ್ರವಾಗಿಸುವಲ್ಲಿ ಸಫಲನಾಗುತ್ತಾನೆ.
ನೀವು ಇದ್ದ ಜಾಗದಲ್ಲಿ ನೀನು, ಬನ್ನಿ, ಹೋಗಿ ಜಾಗದಲ್ಲಿ ಬಾರೋ, ಹೋಗೋ ಬಂದಾಯ್ತು. ಒಂದು ದಿನ ಸಾಯಂಕಾಲ ತನಗೆ ಮೈ ಹುಷಾರಿಲ್ಲ ಎಂದು ಸಂದೇಶ ಜೊತೆಗೆ ಅವನ ಫೋನ್ ನಂಬರ್  ಕಳುಹಿಸಿದ. ಭಾವನಾಳಿಗೋ ತಮ್ಮನಿಗೆನೋ ಆಯಿತು ಎನ್ನೋ ಚಡಪಡಿಕೆ. ನೋಡಿ ಬರಲು ಅವನಿರುವದು ದೂರದ ಶಹರದಲ್ಲಿ. ಬೆಳಗಾಗುವದನ್ನೇ ಕಾದ ಭಾವನ ಬೇರೇನೂ ಯೋಚಿಸದೆ ಫೋನ್ ಮಾಡುತ್ತಾಳೆ. ಅಲ್ಲಿಗೆ ಅವಳು ತನಗರಿವೆ ಇಲ್ಲದೆ ತನ್ನ ಮೊಬೈಲ್ ಸಂಖ್ಯೆಯನ್ನ ತಮ್ಮನಿಗೆ ರವಾನಿಸಿದಂತಾಯ್ತು. ಹೀಗೆ ಅಕ್ಕ ತಮ್ಮನ ಸಂಬಂಧ ಗಟ್ಟಿಯಾಗುತ್ತಾ, ಮಾತನಾಡುವ ಸಮಯ ಕೂಡ  ಬೆಳೆಯುತ್ತಾ ಹೋಯಿತು. ಒಂದು ದಿನ ಮಾತನಾಡದಿದ್ದರೆ ಕರುವನ್ನ ಕಳೆದುಕೊಂಡ ಹಸುವಿನಂತೆ  ಚಡಪಡಿಸ ತೊಡಗಿದಳು. ಇವಳಿಗೆ ತಮ್ಮನ ಮೇಲೆ ಇಷ್ಟು ಪ್ರೀತಿ ಹುಟ್ಟಿಕೊಳ್ಳಲು ಕಾರಣ ಕುಮಾರನ ಜೀವನ ಕಥೆ.
ಕುಮಾರ ಹುಟ್ಟಿದ್ದು ಕರಾವಳಿಯ ಒಂದು ಪುಟ್ಟ ಹಳ್ಳಿಯಲ್ಲಿ.. ಊರ ಮುಖಂಡರ ಮನೆತನದಲ್ಲಿ  ಮೂರು ಹೆಣ್ಣು ಮಕ್ಕಳ  ನಂತರ ಹುಟ್ಟಿದ ಒಬ್ಬನೇ ಮುದ್ದಿನ  ಮಗ. ಮನೆಯವರ ಅತಿ ಪ್ರೀತಿಯಿಂದ ಪುಂಡನಾಗಿ ಬೆಳೆದ.. ಎಂಟನೆ ತರಗತಿಯಲ್ಲಿ ಅನುತ್ತೀರ್ಣನಾದಾಗ ಮನೆಯವರ ಬೈಗುಳ, ಅವಮಾನಕ್ಕೆ ಹೆದರಿ ಯಾರಿಗೂ ಹೇಳದೆ ಊರು ಬಿಟ್ಟು ದೂರದ ಶಹರ ಸೇರಿದ. ಆ ದೊಡ್ಡ ನಗರದಲ್ಲಿ ಬದುಕಿನ ದಾರಿ ಹುಡುಕಿ ಹೊರಟ ಈ ಪೋರನಿಗೆ  ಆಸರೆಯಾಗಿದ್ದು ರಸ್ತೆ ಬದಿಯ ಪಾನಿ ಪುರಿ ಗಾಡಿಯ ಮಾಲಿಕನ ಮನೆ. ಅವನ ಜೊತೆ ಕೆಲಸಮಾಡುತ್ತ ಅವ ಕೊಟ್ಟ ಅರೆ ಹೊಟ್ಟೆ ಊಟ ತಿನ್ನುತ್ತ ದಿನ ಕಳೆಯುತ್ತಿದ್ದ. ಕಷ್ಟದಲ್ಲೂ ಇವನ ಯೋಗ ಎನ್ನುವಂತೆ ಅಲ್ಲೇ ಹತ್ತಿರದ ಹೋಟೆಲಿನ ಮಾಲೀಕ ಒಂದು ದಿನ ಕುಮಾರನನ್ನು ಕರೆದು ಹೋಟೆಲಿನಲ್ಲಿ ಕೆಲಸ ಮಾಡುವಂತೆ ಕೇಳುತ್ತಾನೆ.
ಆಗ ಕುಮಾರ ಅಲ್ಲಿ ಕೆಲಸ ಮಾಡುತ್ತಾ ಅತಿ ಕಷ್ಟದಲ್ಲೂ ತನ್ನ ಓದು ಮುಂದುವರೆಸುವ ಆಸೆಗೆ ಜೀವ ನೀಡಿ ರಾತ್ರಿ ಶಾಲೆಗೆ ಸೇರಿ ಶ್ರದ್ಧೆಯಿಂದ ಓದಿ ಅಂತು ಡಿಗ್ರೀ ಮುಗಿಸಿ ಒಂದು ಸಂಸ್ಥೆ ಯಲ್ಲಿ ಕೆಲಸಕ್ಕೆ ಸೇರಿದ ವಿಷಯವನ್ನ ಕಲ್ಲು ಹೃದಯವೂ ಕರಗುವಂತೆ ಭಾವನಾಳಿಗೆ ಬಣ್ಣಿಸಿದ. ಮೊದಲೇ ಮೃದು ಹೃದಯದ ಭಾವನಾ ಪೂರ್ತಿ ಕರಗಿ ಕುಮಾರನ ಜಾತಿ. ಅಂತಸ್ತು ಎಲ್ಲ ಮರೆತು ತನ್ನ ಕುಟುಂಬದ ಸದಸ್ಯನಂತೆ  ಅವನನ್ನ ಆದರಿಸುತ್ತಾ ತನ್ನ ಕಷ್ಟ ಸುಖಗಳನ್ನೆಲ್ಲ ಹಂಚಿಕೊಳ್ಳಲು ಪ್ರಾರಂಭಿಸುತ್ತಾಳೆ. ಅವನೂ ಸಹ ಅಕ್ಕ ಅಕ್ಕ ಎಂದು ಅವಳ ಕಷ್ಟಕ್ಕೆ ಸಮಾಧಾನದ ಮಾತಾಡಿ ಅವಳಲ್ಲಿ ನಗು ಮೂಡಿಸುತ್ತಿದ್ದ.ಇದು ಇವರಿಬ್ಬರ ಸಂಭಂದಕ್ಕೆ ಭದ್ರ ಬೆಸುಗೆಯಾಯ್ತು. ಜಾತಿ ಯಾವದಾದರೇನು ಪ್ರೀತಿಗೆ. ಅದು ಯಾವದೇ ತರಹದ್ದಾಗಿರಲಿ ಅಣ್ಣ – ತಂಗಿ, ಅಕ್ಕ-ತಮ್ಮ ,ತಾಯಿ-ಮಗ, ಪ್ರೇಮಿಗಳ ಪ್ರೀತಿ ಹೀಗೆ ರೂಪ ಬೇರೆ ಯಾದರೂ ಪ್ರೀತಿ ಅನ್ನೊದು ಹಣ, ಜಾತಿ, ಅಂತಸ್ತುಗಳ ಬೇಧವಿಲ್ಲದೆ  ಅದು ಅವ್ಯಾಹತವಾಗಿ ಎಲ್ಲ ಅಡೆ ತಡೆ ಗಳನ್ನೂ ದಾಟಿ ಸಾಗುತ್ತದೆ ಅಲ್ಲವೇ?
ಹೀಗಿರುವಾಗ ಅಬ್ಬಾ ಅದೊಂದು ದಿನ ತಮ್ಮನ ಮುಖ ಪುಸ್ತಕದಲ್ಲಿ ಅವನ ಛಾಯ ಚಿತ್ರ ಬದಲಾಯ್ತು. ಅದೇ ಭಾವನಾಳ ಭಾವನೆಯ ಕೋಟೆಗೆ ಬಿದ್ದ ಮೊದಲ ಪೆಟ್ಟು. ಒಮ್ಮೆಲೆ ಹಾವನ್ನು ತುಳಿದಂತೆ ಬೆಚ್ಚಿದಳು.ಯಾಕಂದರೆ ಅವಳ ಮುದ್ದಿನ ತಮ್ಮ ಮುಗ್ಧತೆ ಕಳೆದುಕೊಂಡು ರೌಡಿಯಂತೆ ನಿಂತಿದ್ದ.ಆದರೂ ಸಾವರಿಸಿಕೊಂಡ ಭಾವನಾ ಮುಂದೆ ನೋಡಿದಾಗ ಜೊತೆಯಲ್ಲಿ ಒಂದು ಅಸಹ್ಯ ಕರವಾದ ಕೊಂಡಿಯನ್ನು ಇವಳ ಹೆಸರಿಗೆ ಟ್ಯಾಗ್ ಮಾಡಿದ್ದ. ಭಾವನಾಳಿಗೆ ಒಮ್ಮೆಲೆ ಪಾತಾಳಕ್ಕೆ ಕುಸಿದ ಅನುಭವವಾಯ್ತು. ಮುಖ ಬಿಳಿಚಿಕೊಂಡು ಮೈಯೆಲ್ಲಾ ಕಂಪಿಸಿತು, ಕಣ್ಣಲ್ಲಿ ಆಕ್ರೋಶ, ಜೊತೆಗೆ ತಾನು ತಮ್ಮ ಎಂದು ಪ್ರೀತಿಸಿದ ಕುಮಾರನಿಂದಲೇ ಮೋಸಹೋದೆ ಎಂಬ ಅವಮಾನ, ವ್ಯಥೆ ಎಲ್ಲವೂ ಒತ್ತರಿಸಿ ಬರತೊಡಗಿದವು. ಒಮ್ಮೆಲೇ ತಮ್ಮನಿಗೆ ಮೋಸಗಾರ ಎಂದು ಉಗಿದು ತಮ್ಮನನ್ನು ಸ್ನೇಹಿತರ ಪಟ್ಟಿಯಿಂದ ಕಿತ್ತೆಸೆದಳು. ಪಟ್ಟಿಯಿಂದ ಏನೋ ಕಿತ್ತೆಸೆದಳು ಸರಿ ಆದರೆ ಅಷ್ಟೆ ಸುಲಭದಲ್ಲಿ ಮನಸ್ಸಿಂದ ಹೊರಹಾಕಲು ಸಾಧ್ಯವೇ? ದಿನಾಲು ತಮ್ಮನ ನೆನೆದು ಕಣ್ಣೀರು ಹಾಕುವದೆ ಕೆಲಸವಾಯ್ತು. ಎಲ್ಲ ಕೆಲಸದಲ್ಲೂ ಆಸಕ್ತಿ ಕಳೆದುಕೊಂಡು ಮಂಕಾದಳು.
ಒಂದೆರಡು ದಿನ ಹೀಗೆ ಕಳೆಯೋ ಹೊತ್ತಿಗೆ ಭಾವನಾಳ ಫೋನ್ ಗೆ ಸಂದೇಶಗಳು ಬರ ತೊಡಗಿದವು. ಅಕ್ಕಾ ಕ್ಷಮಿಸು, ತಪ್ಪಾಯ್ತು ಒಳ್ಳೇ ಅಕ್ಕನ ಮನಸ್ಸಿಗೆ ನೋವುಕೊಟ್ಟೆ, ಇನ್ನೊಮ್ಮೆ ಹೀಗೆ ಮಾಡಲ್ಲ, ಹೀಗೆ ತರ ತರದ ಬೇಡಿಕೆಗಳು. ಇವಳಿಗೋ ಇದನ್ನೆಲ್ಲಾ ಓದಿ, ಒಮ್ಮೆ ಯಾಕೆ ಕ್ಷಮಿಸಿ  ಕುಮಾರನಿಗೆ ತಪ್ಪನ್ನ ತಿದ್ದಿಕೊಳ್ಳಲು ಒಂದು ಅವಕಾಶ ಕೊಡಬಾರದು ಅನಿಸಿದರೆ ಇನ್ನೊಮ್ಮೆ ಬಾಯ್ತುಂಬ ಅಕ್ಕ ಅಂತ ಕರೆದು ಅಕ್ಕನ ಭಾವನೆಗೆ ಬೆಂಕಿ ಇಟ್ಟ ನೀಚ, ಇವನನ್ನು ನಂಬುವದಾದರು ಹೇಗೆ ಎನ್ನೊ ಅಕ್ರೋಶ ದಲ್ಲಿ ತಲ್ಲಣಿಸುತ್ತಿರುತ್ತಾಳೆ.  ಗಂಡ ಮಕ್ಕಳ ಯಾವ ಸಮಾಧಾನವೂ ಅವಳ ನೋವನ್ನ ಕಡಿಮೆಮಾಡುವಲ್ಲಿ ಯಶಸ್ವಿಯಾಗುತ್ತಿಲ್ಲ. ಅವನು ಯಾವ ತರದ ವ್ಯಕ್ತಿಯೇ ಆಗಿರಲಿ ಅವನು ೩-೪ ತಿಂಗಳಿಂದ ಭಾವನಾಳ ಮನಸ್ಸಲ್ಲಿ ತಮ್ಮನಾಗಿ ಭಾವನೆಯ ಮಹಾಪೂರವನ್ನೇ ಹರಿಸಿದ್ದಾನೆ, ಪ್ರೀತಿ ವಿಶ್ವಾಸ ತೋರಿ ಅವಳ ಮನಸ್ಸಲ್ಲಿ ಆಳವಾಗಿ ಬೇರೂರಿದ್ದಾನೆ, ಮಾತಿನ ಮೋಡಿಯಿಂದ ಅವಳ ಹೃದಯದಲ್ಲಿ ತನ್ನದೇ ಚಾಪು ಒತ್ತಿದ್ದಾನೆ. ಹೀಗಿರುವಾಗ ಅವನನ್ನು ದೂರಮಾಡುವ ಯೋಚನೆ ಬಂದಾಗ ಭಾವನಾಳಿಗೆ ಹೊಟ್ಟೆಯಲ್ಲಿ ಕತ್ತರಿ ಆಡಿಸಿದ ಅನುಭವವಾಗುತ್ತಿತ್ತು. ಕೆಟ್ಟ ನಡತೆಯ ಕುಮಾರನನ್ನು ತಮ್ಮ ಅಂತ ಒಪ್ಪಿಕೊಳ್ಳಲೂ ಮನಸ್ಸಿಗೆ ಹಿಂಸೆಯಾಗ ತೊಡಗಿತು. ಹೀಗೆ ಇಬ್ಬಗೆಯ ಹೊಯ್ದಾಟದಲ್ಲಿ ದಿನಾ ಕಣ್ಣಿರು ಸುರಿಸುತ್ತಾ ಈ ಸಮಸ್ಯೆಯ ಮುಕ್ತಿಗಾಗಿ ಮಾರ್ಗ ಹುಡುಕುತ್ತಿದ್ದಾಳೆ ಭಾವನ.
ಓದುಗರೇ ಈಗ ನೀವೇ ಹೇಳಿ ಭಾವನ ಯಾವ ನಿರ್ಧಾರಕ್ಕೆ ಬಂದರೆ ಒಳಿತು. ತಮ್ಮನ ಸಂದೇಶಕ್ಕೆ ಪ್ರತಿಕ್ರಿಯಿಸದೆ ಮನಸ್ಸನ್ನ ಕಲ್ಲು ಮಾಡಿಕೊಂಡು ತನ್ನ ಮನಸ್ಸಲ್ಲಿ ನಿಂತ ತಮ್ಮನನ್ನ ನಿರ್ಧಯೆಯಿಂದ ದೂರ ತಳ್ಳು ವುದೋ ? ಅಥವಾ  ಅವನಿಗೆ ತಪ್ಪನ್ನ ತಿದ್ದಿಕೊಳ್ಳಲು ಒಂದು ಅವಕಾಶ ಕೊಟ್ಟು ಅವನ ಸ್ವಭಾವವನ್ನ ಪರಿವರ್ತಿಸಲು ಪ್ರಯತ್ನಿಸುವದೋ?
-ಮಮತಾ ಕೀಲಾರ್

2 comments:

  1. ಸಾಮಾಜಿಕ ತಾಣಗಳ ಸಂಬಂಧಗಳನ್ನು ತೀರಾ ವ್ಯಯುಕ್ತಿಕವಾಗಿ ತೆಗೆದುಕೊಳ್ಳುವುದೂ ಕೆಲವೊಮ್ಮೆ ಅಪಾಯಕಾರಿ ಏನೋ?

    ReplyDelete
  2. ಹೌದು...ಅದರಲ್ಲೂ ಸ್ವಲ್ಪ ಸೂಕ್ಷ್ಮ ಮನಸ್ಸಿನವರಿಗೆ ತುಂಬಾ ಕಷ್ಟ....

    ReplyDelete