Monday 6 October 2014

ಮುಸುಕಿನಿಂದ ಬೆಳಕಿಗೆ

ತುಂತುರು ಮಳೆ, ಛಳಿ ಗಾಳಿಯಲ್ಲಿ ಒಂದು ಸಣ್ಣ ಬೆಟ್ಟದ ತಪ್ಪಲಲ್ಲಿರುವ ಕೋಟೆಯಂತಿರುವ ಆಶ್ರಮಕ್ಕೆ ಬಂದು ತಲುಪಿದಳು.ಬಹಳಷ್ಟು ಕೊತುಹಲ,ಅಂಜಿಕೆ ಹಾಗೂ ಏನೋ ಅಸ್ಪಷ್ಟ ತವಕ ಅವಳನ್ನು ಕಾಡುತಿತ್ತು.ಬಹಳ ದಿನಗಳ ಆಸೆ,ಹಲವು ಘರ್ಷಣೆಗಳ ಅಂತ್ಯ ಈ ಪ್ರಯಾಣವಾಗಿತ್ತು.ಅಲ್ಲಿಯ ಹೆಬ್ಬಾಗಿಲಿನತ್ತ ಬಂದಾಗ, ಒಂದು ಕ್ಷಣ ಹಿಂದಿನ ನೆನಪಾಯಿತು.ಧ್ಯಾನ,ಪ್ರಾಣಾಯಾಮ,ಗುರುವಿನ ಭಾವ ಚಿತ್ರ,ಪವಾಡಗಳ ಬಗ್ಗೆ ಪ್ರವಚನ,ಭಜನೆಗಳಲ್ಲಿ ತಲ್ಲೀನವಾದ ಕ್ಷಣಗಳೆಲ್ಲಾ ಕಣ್ಣಮುಂದೆ ಒಮ್ಮೆ ಹಾದು ಹೋದವು.ಅಸಹಾಯಕತೆಗೆ ಅಂತ್ಯ ಹೇಳುವ ಕ್ಷಣ ಬಂತೆಂದು ಹರ್ಷಿಸಿದಳು.
ಆಶ್ರಮದ ವಾತಾವರಣ ಬಹಳ ಸುಂದರವಾಗಿತ್ತು.ಮರ ಗಿಡಗಳು,ಜರಿ ತೊರೆಗಳು ಹಾಗೂ ಬ್ರಹತ್ ಧ್ಯಾನ ಮಂದಿರ ಅವಳ ಮನ ಗೆದ್ದಿತ್ತು.ಮಾಯಾ ಜಗತ್ತಿನಲ್ಲಿ ತಲ್ಲೀನಳಾದಳು. ಭೋಜನದ ವೇಳೆ ಅಲ್ಲಿಯ ವಾಸಿಗಳು ಒಂದು ಸುಂದರ ಕಟ್ಟಡದಲ್ಲಿ ಬಗೆ ಬಗೆಯ ಖಾದ್ಯಗಳನೊಳಗೊಂಡ ಊಟ ಬಡಿಸಿದರು.ನಂತರ ಬೆಟ್ಟದ ಮೇಲಿರುವ ಒಂದು ವೈವಿದ್ಯಮಯ ಕಲ್ಲುಗಳ ಮಂಟಪಕ್ಕೆ ಕರೆದೊಯ್ದು ಧ್ಯಾನ ಮಾಡಲು ಹೇಳಿದರು. ಧ್ಯಾನದ ಬಳಿಕ ಒಂದು ಚಿಕ್ಕ ಕುಟೀರದ ಬಳಿ ಕರೆದುಕೊಂಡು ಹೋದರು.ಅಲ್ಲಿ ನೂರಾರು ಭಕ್ತರು ಭಜನೆಯಲ್ಲಿ ತಲ್ಲೀನರಾಗಿದ್ದರು.ಅವಳೂ ಅವರೊಂದಿಗೆ ಧ್ವನಿ ಗೂಡಿಸಿ ಗುರುವಿನ ದರುಶನಕ್ಕಾಗಿ ಕಾಯ ತೊಡಗಿದಳು.
ಎಷ್ಟೋ ಸಮಯದ ನಂತರ ಜಯಕಾರಗಳ ಧ್ವನಿ ಅವಳನ್ನ ಎಚ್ಚರಿಸಿತು.ತಾನು ಬಂದ ಮಹದ್ದೊದೇಶ ಅವಳನ್ನ ವಾಸ್ತವಕ್ಕೆ ತಂದಿತು. ಉದ್ದನೆಯ ಶಲ್ಯವನ್ನು ಮೈಗೆರಸಿ ಬಿಸುವ ಗಾಳಿ ಮಳೆಯಲ್ಲಿ ಜಯ ಘೋಶ ಮತ್ತು ಜನಗಳ ಮಧ್ಯದಲ್ಲಿ ನಿಧಾನವಾಗಿ ಭಕ್ತ ಸಮೂಹದೆಡೆಗೆ ಕೈ ಬೀಸುತ್ತಾ ,ಗುಂಪಿನಲ್ಲಿ ಹಲವರ ತಲೆಸವರಿ ಪ್ರವಚನ ಮಾಡುವ ಸ್ಥಳಕ್ಕೆ ಗುರುಗಳು ಪಾದ ಬೆಳೆಸಿದರು.ದೀರ್ಘ ಪ್ರವಚನಕ್ಕೆ ಭಕ್ತರು ಪರವಶರಾದರು.ಆದರೆ ಅವಳಿಗೆ ಅದೆಲ್ಲಾ ಬರೇ ಮಾತುಗಳಾಗಿದ್ದವು. ಗುರುವಲ್ಲಿ ತನ್ನ ನೋವನ್ನು ಹೇಳಿಕೊಂಡು ತನ್ನ ಸಮಸ್ಯೆಗೆ ಅದ್ಭುತವಾದ ಪರಿಹಾರ ಸಿಗುವದೆಂಬ ನಂಬಿಕೆಯಲ್ಲಿ ಬಂದಿದ್ದಳು. ಪ್ರವಚನದ ನಂತರ ಗುರುವನ್ನು ಭಕ್ತರು ಮುತ್ತಿಗೆ ಹಾಕಿದರು.ನೂಕು ನುಗ್ಗಲಲ್ಲಿ ಅವರ ಬಳಿ ಹೋಗಿ ತನ್ನ ನೋವನ್ನು ಕಣ್ಣೀರಿಟ್ಟು ಅರಿಕೆ ಮಾಡಿಕೊಂಡಳು. ಗುರುವು
ಹುಂ ಎಂದು ಎದ್ದು ಮುಂದೆ ಸಾಗಿದರು. ಆ ಕ್ಷಣದಲ್ಲಿ ಅವಳಿಗೆ ತನ್ನ ಅಸಹಾಯಕತೆ ಹಾಗೂ ಮುಗ್ಧ ನಂಬಿಕೆಯ ಬಗ್ಗೆ ಅರಿವಾಯಿತು.ಶಾಂತಿ,ಪ್ರೀತಿಯ ದೂತ,ಅಪಾರ ಪವಾಡಗಳ ಶಿಲ್ಪಿ,ನಡೆದಾಡುವ ಸಾಕ್ಷಾತ್ ದೇವರು ಅಂದದ್ದೆಲ್ಲ ಬರಿ ಜಾಹಿರಾತು.ತನ್ನಂತರಂಗದ ಸಮಸ್ಯೆಗಳಿಗೆ ತಾನೇ ಜವಾಬ್ದಾರಿ,ತನ್ನ ನೋವುಗಳಿಗೆ ಪರಿಹಾರ ನನ್ನ ಮನಸ್ಸಲ್ಲೇ ಹುಡಕಬೇಕು. ತನ್ನೊಡನೆ ತನ್ನ ಆಧಾರಕ್ಕೆ ತನ್ನ ಕುಟುಂಬವೆಂಬುದು ಅರಿವಾಯಿತು.ನಿಧಾನವಾಗಿ ಕಣ್ಣೊರೆಸುತ್ತಾ ದೂರದಲ್ಲಿ ನಿಂತಿದ್ದ ಗಂಡ,ಮಗನೆಡೆಗೆ ಕಾಲಿಟ್ಟಳು.ಮಂಜು ಮುಸುಕಿನಿಂದ ಶುಭ್ರ ಬೆಳಕಿನೆಡೆಗೆ ಹೋದ ಅನುಭವವಾಯಿತು. ಓಡಿ ಹೋಗಿ ಮಗುವನ್ನು ತಬ್ಬಿಕೊಂಡಳು.ತಾ ಪಡೆದದ್ದೇ ತನ್ನ ಭಾಗ್ಯ,ತನ್ನವರೇ ತನ್ನ ಸರ್ವಸ್ವವೆಂದುಕೊಂಡು ಆ ಮಾಯಾ ಲೋಕದಿಂದ ತನ್ನೂರಿಗೆ ಹಿಂತಿರುಗಿದಳು.
                                   


1 comment:

  1. ಸಮಸ್ಯೆಗಳಿಂದ ಓಡಿ ಹೋಗಲು ಸಾಧ್ಯವೇ ಇಲ್ಲವಲ್ಲ.

    ಅಂದಹಾಗೆ, ಸ್ವಘೋಷಿತ ದೇವಮಾನವ ಸದ್ಗುರುಗಳೂ ಸಹ ಶ್ರೀಮಂತರ ಪಾಲಾಗಿರುವುದೇ ಅಸಲೀ ದುರಂತ!

    ReplyDelete