Thursday 14 August 2014

ಹೆಗಲೇ ಅಂಬಾರಿಯಾದಾಗ....

ಹಳ್ಳಿ  ಮಕ್ಕಳು  ಮಳೆ ಗಾಳಿ ಚಳಿ ಬಿಸಿಲು ಒಂದನ್ನೂ ಲೆಕ್ಕಿಸದೆ, ಆಟವಾಡುತ್ತಾ ಬೆಳೆದಿರುತ್ತೇವೆ . ಆರೋಗ್ಯವೂ ಅಷ್ಟೆ ಕಲ್ಲನ್ನು ತಿಂದರೂ ಜಿರ್ಣಿಸೋ ಶಕ್ತಿ. ಆಗಿನ್ನು ಚಿಕ್ಕವಳು. ಪುಂಡಾಟಿಕೆಯಲ್ಲಿ ಗುಡ್ಡ ಬೆಟ್ಟ ಸುತ್ತುತ್ತಾ, ಗೇರು ಹಣ್ಣು,ನೇರಳೆ ಹಣ್ಣು ತಿನ್ನುತ್ತಾ ನಿಸರ್ಗದ ಮಡಿಲ ಮಗಳಾಗಿ ಬೆಳೆದವಳು. ಎಷ್ಟೇ ಗಟ್ಟಿ ಆರೋಗ್ಯ ಇದ್ದರೂ ಒಂದಲ್ಲ ಒಂದು ಸಮಯದಲ್ಲಿ ಪ್ರಕೃತಿಯ ಎದುರು ತಲೆ ಬಾಗಲೇ ಬೇಕಲ್ಲ . ತಂಪು ಉಷ್ಣ ಆಗೋದು, ಉಷ್ಣ ತಂಪಾಗೋದು ನಡೆದೇ ನಡೆಯುತ್ತೆ. ಅದರಂತೆ ನಾನೂ ಒಂದು ದಿನ ಉಷ್ಣ (ಜ್ವರ ) ಬಂದು ಮಲಗಿದೆ. ಆಯಿ ಮನೆ ಮದ್ಧುಗಳನ್ನೆಲ್ಲ ಮಾಡಿ ಕುಡಿಸಿದರೂ ಯಾವ ಪ್ರಯೋಜನವೂ ಆಗದೆ ಎಲ್ಲವನ್ನೂ ನಿಮಿಷದಲ್ಲೇ ಕಕ್ಕುತ್ತ ಬೆಳಗಾಗುವದರೊಳಗೆ ನಿತ್ರಾಣಳಾಗಿದ್ದೆ. ಮನೆಯವರಿಗೆಲ್ಲ ತಲೆಬಿಸಿ ಶುರುವಾಯ್ತು. ಅದು ಹಳ್ಳಿ ಡಾಕ್ಟರ್ ಬಳಿ ನನ್ನ ಒಯ್ಯಲು ವಾಹನಗಳಿಲ್ಲ. ಜೊತೆಗೆ ಮನೆ ತನಕ ವಾಹನಗಳು ಬರುವಂತ ರಸ್ತೆಗಳೂ ಇಲ್ಲ. ನಡೆದು ಹೋಗಲು ನನ್ನಲ್ಲಿ ಶಕ್ತಿ ಇರಲಿಲ್ಲ. ಆಗ ಬಂದವನೇ ರಾಮ ಗೌಡ. ಊರಲ್ಲಿ ಅಡಿಕೆ ತೋಟವಿದ್ದ ಪ್ರತಿಯೊಬ್ಬರಿಗೂ ರಾಮ ಗೌಡ ಆಪ್ತ. ಯಾಕೆಂದರೆ ಇಡೀ ಊರಿನಲ್ಲಿ ಅಡಿಕೆ ಕೊಯ್ಯೋ ಏಕೈಕ ಪ್ರತಿಭೆ. ಅಡಿಕೆ ಕೊಯ್ಯೋದು ಸುಲುಭದ ಕೆಲಸವಲ್ಲ. ಸರ್ಕಲ್ ತರ ಸುತ್ತಿದ ಹಗ್ಗವನ್ನು ಕಾಲಿಗೆ ಸಿಕ್ಕಿಸಿಕೊಂಡು ಮರ ಏರೋದು,ಮರದ ಕೆಲಸಕ್ಕೆಂದೇ ಇರುವ ವಿಶೇಷ ತರದ ಮಣೆಯಲ್ಲಿ ಮರದ ಮೇಲೆ ಕುಳಿತು ಅಡಿಕೆ ಕೊನೆ ಕತ್ತರಿಸುವದು, ಸೊಂಟಕ್ಕೆ ಸುತ್ತಿಕೊಂಡ ಇನ್ನೊಂದು ಹಗ್ಗದಿಂದ ಕೊನೆ ಇಳಿಸೋದು, ಜೊತೆಗೆ ಬೆನ್ನಿಗೆ ಸಿಕ್ಕಿಸಿಕೊಂಡ ಜೋಟಿ (ಒಂದು ತರದ ಕೊಕ್ಕೆ) ಯಿಂದ ಇನ್ನೊಂದು ಮರವನ್ನ ಬಗ್ಗಿಸಿ ಮರದಿಂದ ಮರಕ್ಕೆ ಹಾರೋದು ಇವೆಲ್ಲ ಎಲ್ಲರಿಗೂ ಬರುವಂತದ್ದಲ್ಲ . ದೈರ್ಯ ಇರಬೇಕು. ಆದರೆ ಈ ಕೆಲಸವನ್ನು ನೀರು ಕುಡಿದಷ್ಟೇ ಸುಲುಭವಾಗಿ ಮಾಡುವವನು ಈ ರಾಮಗೌಡ. ಇವನ ವಿಶೇಷತೆ ಎಂದರೆ ಇವನು ಈ ಕೆಲಸವನ್ನೆಲ್ಲ ಎಣ್ಣೆ (ಸರಾಯಿ) ಹಾಕಿಕೊಂಡೆ ಮಾಡುತ್ತಿದ್ದ. ಅ ದಿವಸ ನಮ್ಮ ಮನೆ ಕೆಲಸಕ್ಕೆಂದು ಬಂದವನು ಯಾವಾಗಲೂ ಚೈತನ್ಯದ ಚಿಲುಮೆಯಂತೆ ಇರುತ್ತಿದ್ದ ನಾನು ಶವದ ತರ ಹಾಸಿಗೆ ಹಿಡಿದಿದ್ದು ನೋಡಿ ಅವನಿಗೂ ಬೇಜಾರಾಯ್ತು. ಅಪ್ಪನ ಬಳಿ ನೀವು ಒಪ್ಪುವದಾದರೆ ನಾನು ಇವಳನ್ನು ಹೆಗಲಮೇಲೆ ಹೊತ್ತು ಸುರಕ್ಷಿತವಾಗಿ ಡಾಕ್ಟರ ಬಳಿ ಕರೆದೊಯ್ಯುತ್ತೇನೆ ಎಂದ. ಮನೆಯಲ್ಲಿ ಇವನು ಮೊದಲೇ ಕುಡುಕ  ದಾರಿಯಲ್ಲಿ ಬೀಳಿಸಿದರೆ ಅಂತ ಅನುಮಾನ ಪಟ್ಟರೂ ಬೇರೆ ದಾರಿಕಾಣದೆ ಅಣ್ಣನೂ ಜೊತೆಗೆ ಬರುವದೆಂದು ಒಪ್ಪಿಕೊಂಡರು. ನನ್ನ ಎಬ್ಬಿಸಿ ಅವನ ಹೆಗಲ ಮೇಲೆ ಕೂರಿಸಿದ್ದೂ  ಆಯ್ತು. ಡಾಕ್ಟರ ಇದ್ದಿದ್ದು ಕವಲಕ್ಕಿ ಅನ್ನೋ ಊರಲ್ಲಿ.ತೋಟ,ಹೊಳೆ,ಮನೆಗಳು,ದಾಟಿ ಗುಡ್ಡ ಹತ್ತಿ ತುಂಬಾ ನಡೆದು  ಹೋಗಬೇಕಿತ್ತು.  ದಾರಿಯಲ್ಲಿ ಸಿಕ್ಕವರೆಲ್ಲ ವಿಷಯ ಕೇಳಿ ನನ್ನ ಕಡೆ ಕರುಣೆಯ ನೋಟ ಬೀರಿದರೆ ಮಕ್ಕಳೆಲ್ಲ ನನ್ನ ಸವಾರಿ ನೋಡಿ ಅಸೂಯೆ ಪಡುತ್ತಿದ್ದರು. ಹೆಗಲೇರಿ ಕುಳಿತ ನನಗೆ ಜ್ವರದಲ್ಲೂ ಅಂಬಾರಿ ಹೊತ್ತ ಆನೆಯ ಮೇಲೆ ಕುಳಿತ ಅನುಭವ. ಕಣ್ಣುಬಿಡ ಲಾರದಷ್ಟು ಜ್ವರ ಇದ್ದರೂ ಕಷ್ಟದಲ್ಲಿ ಸುತ್ತಲ್ಲೂ ನೋಡುತ್ತಿದ್ದೆ.ರಾಮ ಗೌಡನ ಕಾಲು ಸ್ವಲ್ಪ ಆಚೆ ಈಚೆ ಆದರೂ ಅಣ್ಣ ಪಾಪ ಟೆನ್ಶ ನ್ ಅಲ್ಲಿ ಹುಷಾರು ಅನ್ನುತ್ತಿದ್ದ.  ಅಂತೂ ಡಾಕ್ಟರ ಬಳಿ ಹೋಗಿ ಅವರು ಇಂಜೆಕ್ಷನ್ ಮಾಡಿ ಒಂದು ತಾಸು ಅಲ್ಲೇ ಇಟ್ಟುಕೊಂಡು ನಾನು ಸ್ವಲ್ಪ ಚೇತರಿಸಿಕೊಂಡಾಗ ಮನೆಗೆ ಕರೆದುಕೊಂಡು ಹೋಗಿ ಅಂದರು.  ಮತ್ತೆ ಅದೇ ಅಂಬಾರಿಯಲ್ಲಿ ಕುಳಿತು ನಾನು ಮನೆಗೆ ಬಂದಿದ್ದೂ ಆಯ್ತು. ಅಂತೂ ರಾಮಗೌಡ ಹೇಳಿದಂತೆ ಸರಾಯಿ ಅಂಗಡಿಯ ಎದುರೇ ನಡೆದು ಹೋದರೂ ಸ್ವಲ್ಪವೂ ಕುಡಿಯದೆ ತನ್ನ ಮಾತಿನಂತೆ ಸುರಕ್ಷಿತವಾಗಿ ನನ್ನನ್ನು ಮನೆಗೆ ತಂದು ಬಿಟ್ಟದ್ದ . ನನ್ನ ಅಂಬಾರಿ ಸವಾರಿಯೂ ಸಂತಸದಿಂದ ಮುಗಿದಿತ್ತು. ಪಾಪ ಈಗ ಕೆಲವು ವರುಷದ ಹಿಂದೆ ಕುಡಿದು ಮರಹತ್ತಿದ್ದ ರಾಮಗೌಡ ಮರದಿಂದ ಬಿದ್ದು ಪ್ರಾಣ ಕಳೆದುಕೊಂಡ. ಈಗ ಬರಿ ನೆನಪಷ್ಟೆ.


1 comment:

  1. ರಾಮಗೌಡನ ಅಂಬಾರಿ ರೋಚಕವಾಗಿದೆ.
    ಅಡಿಕೆ ಕುಯ್ಯೋ ವಿಧಾನವೂ ಅರಿವಾಯಿತು.
    ಗೌಡನ ಮೃತ್ಯು ಸಾರಾಯಿಯಿಂದಲೇ ಎನ್ನುವುದು ಗಮನಾರ್ಹ!

    ReplyDelete