Wednesday, 30 May 2012


ಪಂಜರದ ಗಿಳಿ
ನಾನಿಲ್ಲಿ ಪಂಜರದಾ ಗಿಳಿ ನಲ್ಲಾ
ನಿನ್ನ ಹೃದಯದ ಪಂಜರದಲ್ಲಿ
ನನ್ನ ಬಂಧಿಸಿರುವೆಯಲ್ಲಾ
ಹಾರಬೇಕೆಂದರೂ ಹಾರಲಾರೆ
ಓಡಬೇಕೆಂದರೂ ಓಡಲಾರೆ
ನಿನ್ನ ಪ್ರೇಮ ಪಾಶ ಇಲ್ಲೇ
ಎಳೆದು ತರುವದಲ್ಲಾ
ಇದು ಅಂತಿಂತ ಪಂಜರವಲ್ಲ
ಕಬ್ಬಿಣದಂತೆ ತುಕ್ಕಿಲ್ಲ
ಮಣ್ಣಿನಂತೆ ಅಳಿವಿಲ್ಲ
ಬಣ್ಣಗಳೆಂದು ಮಾಸೋಲ್ಲ
ಇದು ನಿತ್ಯ ನೂತನದ
ಪ್ರೀತಿಯಾ ಪಂಜರ
ನನಗೆ ಬೇಸರವಿಲ್ಲ
ಹೊರಬರಲಾರೆ ನಾನೆಂದು
ಸಿಗುತಿಹುದು ಸುಖ ನೆಮ್ಮದಿ
ಇಲ್ಲಿಯೇ ನನಗಿಂದು
ಆ ದೇವರೇ ನೀಡಿಹನು
ಬೆಡಲೇನಿಲ್ಲ ನನಗಿನ್ನು
ಸ್ವಾತಂತ್ರ್ಯದ ಹುಚ್ಚ್ಯಾಕೆ
ನಿನ್ನ ಪ್ರೀತಿ ಕಾಯುವಾಗ
ಈ ಪಂಜರದ ಗಿಳಿಯನ್ನು
ನನಗನಿಸಿಲ್ಲ ಇದು ಸಂಕೋಲೆ ಎಂದು
ಅರಿತಿಹೆ ನಾ ಇದು ಪ್ರೀತಿಯಾ ಬಂಧವೆಂದು
ಕಾಣುತಿಹೆ ಪ್ರತಿದಿನವೂ ಹೊಸತನ
ನಮ್ಮ ಜೀವನವೇ ಒಂದು ಪ್ರೇಮದಾ ಕವನ
 



ಅಡಿಗೆಯೆಂಬುದೂ ಒಂದು ಕಲೆ
ತಿಳಿದಿರಬೇಕು ರುಚಿಬರಿಸೋ ಗುಟ್ಟಿನಾ ಸೆಲೆ 
ಶುಚಿ ರುಚಿ ಇದ್ದರೆನೆ ಊಟ
ಇಲ್ಲದಿದ್ದರೆ ಹೊಟ್ಟೆಯಲ್ಲಿ ಶುರು ತೊಳಲಾಟ

ಸವಿ ನೆನಪು

ಓ  ನೆನಪೆ ನೀನೊಂದು
ಮಳೆಗಾಲದ ಬಿಸಿಲಂತೆ
ಛಾಪಿಸುವೆ ಮಳೆಬಿಲ್ಲ
ಮನಸಿನಾ ತುಂಬಾ

ಓ ಸವಿ ನೆನಪೆ ನೀನೊಂದು
ಸುರಿವ ಬೆಳದಿಂಗಳಂತೆ
ಕತ್ತಲಲೂ ಮೂಡಿಸುವೆ
ತಂಪಾದ ಬೆಳಕ

ಓ ಸವಿ ನೆನಪೆ ನೀನೊಂದು
ಸುಂದರ ಸಂಗೀತದಂತೆ
ಹೃದಯದ ವೀಣೆಯ ನುಡಿಸಿ
ಬಡಿದೆಬ್ಬಿಸುವೆ ರಾಗ,ಭಾವ

ಓ ಸವಿ ನೆನಪೆ ನೀನೊಂದು
ಹರಿಯುವಾ ನದಿಯಂತೆ
ಧಮನಿ ಧಮನಿಯಲೂ  ನುಸುಳಿ
ಹರಡುವೆ ಮನದ ತುಂಬಾ


Friday, 25 May 2012


ನೆನಪು
ನೆನಪೆ ನೀ ಮುತ್ತಬೇಡ
ಕಾರ್ಮೋಡದಂತೆ
ಅದರಿಂದ ಗುಡುಗು ಮಿಂಚುಗಳ
ಸಂಚಾರ ಮನದಲ್ಲಿ
ಮಳೆ,ಪ್ರವಾಹ ಕಣ್ಣಲ್ಲಿ
ನೀ ಕೊಚ್ಚಿ ಹೋಗುವೆ
ಅಸ್ತಿತ್ವ ಕಳೆದುಕೊಂಡು
ನನಗಿಷ್ಟ ನೀನಿರುವುದು
ಹದವಾಗಿ ಮನದಲ್ಲಿ
ಮಿತಿ ಮೀರಿ ಆವರಿಸೆ
ವಿಷವಹುದು ಅಮೃತವೂ
ನೀನಿದಕೆ ಸಹಕರಿಸೆ
ನಡೆವುದು ಮನಸು ಕನಸಿನ
ಸಹ ಬಾಳ್ವೆಯು

Monday, 21 May 2012


ಕನಸಿನ ಪಯಣ
ಕನಸಿನಾ ಕುದುರೆಯನೇರಿ ಹೊರಟೆ ನಾ
ದೂರದೂರಿಗೆ ಪಯಣ
ಕೊಂಡೊಯ್ಯುತ್ತ್ತಿದೆ ಶರವೇಗದಿ ನನ್ನ
ಸೇರಿಸಲು ಸುಂದರ ತಾಣ
ಅದೊಂದು ಪುಟ್ಟ ಬಂಗಲೆ
ಹೊರಗೆ ಮೈ ನವಿರೇಳಿಸುವ ಹೂದೋಟ
ಹಕ್ಕಿಗಳ ಚಿಲಿಪಿಲಿ,ಹೂಗಳ ಸುಗಂಧ
ದುಂಬಿಗಳ ಝೇಂಕಾರ ಗಿಡಮರಗಳ ನೃತ್ಯ
ಆಹಾ! ಅದೆಂತಹ ಸುಂದರ ನಯನ ಮನೋಹರ
ನೋಡಿದಷ್ಟು  ತಣಿಯದಾ ದಾಹ

ಬಂಗಲೆಯ ಒಳಹೊಕ್ಕಿ ನೋಡಿದರೆ
ತೆರೆಯಿತೊಂದು ಅದ್ಭುತಲೋಕ
ಕಿಡಕಿಯಿಂದಿಳಿಬಿಟ್ಟ ತಿಳಿಗುಲಾಬಿ ಪರದೆ
ಗಾಳಿಬೀಸಲು ಅಲ್ಲಿ ಬೆಳಕು ನೆರಳಿನ ಆಟ
ಇನ್ನೊಂದುಕಡೆ ಮೆತ್ತನೆಯ ಪಲ್ಲಂಗ
ಸುತ್ತಲೂ ಮಂದಬೆಳಕಿನ ದೀಪ
ಅನಿಸಿತೆನಗೆ ಇದನನುಭವಿಸುವವ
ಎಂತಹ ಪುಣ್ಯವಂತ,ಸಿರಿಸಂಪತ್ತಿನೊಡೆಯ
ನಿಜಕೂ ಭಾಗ್ಯವಂತ

ಬಂದಿತೊಂದು ಆಗ ದಡೂತಿ ದೇಹ ಕಷ್ಟದಲಿ
ಆಡಿತವನ ಕೈ ಪುಟ್ಟ ಪೆಟ್ಟಿಗೆಯ ಮುಚ್ಚಳದಲಿ
ತೆಗೆದ ಮುಷ್ಟಿಯ ತುಂಬಾ ಬಣ್ಣದ ಕಹಿ ಮಾತ್ರೆಯ
ಕಷ್ಟದಿ ನುಂಗಿದ ಆ ರೋಗಗಳ ಮೂಟೆಯೊಡೆಯ
ಅರಿವಾಯಿತೆನಗಾಗ ಸಿರಿವಂತನಾ ಭಾಗ್ಯ
ಕೊಡದಿರು ದೇವರೇ  ಇಂತಹಸೌಭಾಗ್ಯ
ಒಮ್ಮೆಲೆ ನಾ ಬಿದ್ದೆ ಕನಸಿನ ಕುದುರೆಯಿಂದ ಕೆಳಗೆ
ಆದರೆ ನಾ ಬಿದ್ದಿದ್ದು ಮಾತ್ರ ಹಾಸಿಗೆಯಿಂದ ಕೆಳಗೆ  

Saturday, 19 May 2012

ಚಿಂತೆ
ಮನಸೇ ಓ ಮನಸೇ
ಹೀಗೇಕೆ ನಿನಗೆ ಚಿಂತೆ
ಚಿಂತೆಗೂ ಚಿತೆಗೂ
ಬರಿ ಒಂದು ಸೊನ್ನೆಯ ಅಂತರವಂತೆ
ಚಿತೆ ದಹಿಸುವದು ದೇಹವನ್ನ
ಚಿಂತೆ ದಹಿಸುವದು ಮನಸ್ಸನ್ನ
ಇಂತಿರುವಾಗ ನಿನಗೇಕೆಬೇಕು
ಸುಡುಗಾಡಿನಾ ಆ ದಾರಿ
ಮರೆತು ಬಾಳಲೇ ಬೇಕು
ಭೂಮಿಯ ಋಣ ತೀರುವ ತನಕ
ನೀನಾಗಿರು ಬಾಳಿಗೆ ಆಭಾರಿ
ಸಮ ಚಿತ್ತತೆ ಕಷ್ಟವೇನಲ್ಲ
ಚಂಚಲತೆ ಪಕ್ವತೆಯ ಲಕ್ಷಣವಲ್ಲ
ಶಾಂತ ಗಂಭೀರ ರಸಗಳೇ ಭೂಷಣ
ಮರೆತರೆ ತೆಗೆದುಕೊಳ್ಳುವದು ನಿನ್ನನ್ನೇ ಆಪೋಷಣ

Wednesday, 16 May 2012

ನೀರು ಕಣ್ಣೀರು
ಆರು ತಿಂಗಳು ಕಳೆದರೂ
ಕಾದುಕಾದು ಬೇಸರವಾದರೂ
ಮುಷ್ಕರ ಧರಣಿ ನಡೆಯುತ್ತಿದ್ದರೂ
ಇನ್ನೂ ಯಾಕ ಬರಲಿಲ್ಲವ್ವ
ನಲ್ಲಿಯಲ್ಲಿ ನೀರು
ಭೂ ತಾಯಿ ಬರುಡಾದರೂ
ಪೈರುಗಳೆಲ್ಲ ನಾಶವಾದರೂ
ಹೊಟ್ಟೆಗೆ ಹಿಟ್ಟಿಲ್ಲದಂತಾದರೂ
ಇನ್ನೂ ಯಾಕ ನಿಂತಿಲ್ಲವ್ವ
ಕಣ್ಣಲ್ಲಿ ನೀರು  

Friday, 4 May 2012


ಸತ್ಯ
ಹುಡುಕುತಿಹೆ ಹುಡುಕುತಿಹೆ
ನಾ ಸತ್ಯವಾ
ಎಲ್ಲೆಂದು ಹುಡುಕಲಿ,ಹೇಗೆಂದು ಹುಡುಕಲಿ
ಯಾರನ್ನ ಕೇಳಿ ಹುಡುಕಲಿ ನಾ
ಈ ಸುಳ್ಳಿನಾ ಸಂತೆಯಲಿ

ನೋಟಿನಾ ಕಂತೆಯಲಿ ಸಿಕ್ಕಿ ಕಳೆದೋಯ್ತಾ
ರೌಡಿಗಳ ಮಚ್ಚಿಗೆ ಹೆದರಿ ಓಡಿಹೋಯ್ತಾ
ದೇವರ ಹುಂಡಿಯಲಿ ಬಿದ್ದೋಯ್ತಾ
ಎಲ್ಲಿ ಹೋಯಿತೋ ಕಾಣೆ
ಈ ಸುಳ್ಳಿನಾ  ಸಂತೆಯಲಿ

ನ್ಯಾಯ ದೇವತೆಯ ಕಣ್ಣಿನ ಕಪ್ಪು ಪಟ್ಟಿಯಲಿ ಮರೆಯಾಯ್ತಾ
ನ್ಯಾಯವಾದಿಗಳ ಮಾತಿನಾ ಜಾಣ್ಮೆಯಲಿ  ಕೊಚ್ಚಿಹೋಯ್ತಾ
ಮನುಜನ ಆಸೆಯ ದಾಹದಲಿ ಹುದುಗಿ ಹೋಯ್ತಾ
ಎಲ್ಲಿ ಹೋಯಿತೋ ಕಾಣೆ
ಈ ಸುಳ್ಳಿನಾ ಸಂತೆಯಲಿ

ಕಾವಿಬಣ್ಣವ ಕಂಡು ಕರಗಿ ಹೋಯ್ತಾ
ಕಾಖಿ ಬಣ್ಣವ ಕಂಡು ನಿಲ್ಲದಾಯ್ತಾ
ಖಾದಿ ಬಣ್ಣದ ಕದರಿಗೆ ಕಣ್ಮರೆಯಾಗೋಯ್ತಾ
ಎಲ್ಲಿ ಹುಡುಕಿದರೂ ಸಿಗುತ್ತಿಲ್ಲವಣ್ಣಾ
ಸಿಕ್ಕರೆ ತಿಳಿಸಿ ಅಂತಹ ತಾಣವನ್ನಾ