ಕಣ್ಣು ತೆರೆಯಲೇ ಬೇಕು ದೀಪವಿಡುವ ಸಮಯಕೆ ಮುಸ್ಸಂಜೆ ಬರುತಲಿದೆ ಕಬಳಿಸ ಲದೆಷ್ಟು ಹೊತ್ತು ಕತ್ತಲಿಗೆ ಇದು ಹಗಲೇ ಇರಬಹುದು ಪಾಶಿಮಾತ್ಯರಿಗೆ ಕತ್ತಲೆಕೋ ಇಷ್ಟ ನಮ್ಮ ಸಂಸ್ಕೃತಿಗೆ
ಕಣ್ಬಿಟ್ಟರೆಲ್ಲಿ ಕನಸು ಕರಗುವ ದೆಂಬ ಭಯ ಕಾಲ ತಡೆಯುವ ಶಕ್ತಿ ಎನಗಿಲ್ಲವಯ್ಯ ಬುದ್ಧಿ ಹೇಳುತಿದೆ ಇದು ಹಗಲು ಕನಸೆಂದು ಹೃದಯವೇಕೋ ಧ್ವನಿಸಿದೆ ಆತ್ಮದ ಕೊರಿಕೆಯಿದು ನಿಜವಹುದೆಂದು
ಆದರೂ ಒಮ್ಮೊಮ್ಮೆ ಮನುಜನ ಸಹಜ ದೌರ್ಬಲ್ಯ ಮನ ಅಣಕಿಸಿದೆ ಮರುಳೇ.. ರಂಗಾದರೇನು ..ಕಪ್ಪು ಬಿಳುಪಾದರೇನು ಮುಂಜಾವಿನ ಕನಸಲ್ಲ ನಿಜವಾಗಲು..
ಏನು ಮಾಡಲು ಅರಿಯೆ.... ಏನು ಯೋಚಿಸಲರಿಯೇ .. ಹೆಜ್ಜೆ ಚುರುಕಾಗಿಸಿ ಊರ ತಲುಪಲೇನು ಶೂನ್ಯದಲೇ ಕರಗಿ ಕತ್ತಲಾಗಲೇನು...
Thursday, 18 September 2014
ನೆನಪುಗಳನೆಲ್ಲ ಗುಡಿಸಿ ಬಿಸುಟಿದೆನೆಂಬ ಗೆದ್ದ ಹಮ್ಮಿನಲ್ಲಿ ಧ್ಯಾನಕ್ಕೆ ಕುಳಿತೆ ಮನದೊಳಗೆ ನಾನಿಳಿದಂತೆ ಸೋಲನೆತ್ತಿ ನಗುತ್ತಿತ್ತು ಆಳದಲಿ ಹೃದಯ ಕೆತ್ತಿದ ನಿನ್ನಯಾ ಮೂರುತಿ....
Wednesday, 17 September 2014
ನಿನ್ನೆ ನಾಳೆಗಳ ಮೇಲಿನದಲ್ಲ ನನ್ನ ಭರವಸೆ ನನಗಿಹುದು ನನ್ನಾತ್ಮವಿಶ್ವಾಸದಲಿ ನಂಬಿಕೆ ನಿನ್ನೆ ಹೇಗೆ ಇದ್ದಿರಲಿ ನಾಳೆ ಏನೇ ಬರಲಿ ನಾ ನಗುವೆ ಇಂದು ಸಂತಸದಿ....
Tuesday, 16 September 2014
ಆಯಿ (ಅಮ್ಮ)
ಆಯೀ ಯಾಕೋ ಇವತ್ತೆಲ್ಲ ನಿನ್ನದೇ ನೆನಪು..ಆಗಾಗ ಕಣ್ಣು ತೇವವಾಗುತ್ತಿದೆ. ಯಾಕೋ ನಿನ್ನ
ಪಕ್ಕ ಜಗಲಿಯಲ್ಲಿ ಊಟದ ಮುಂಚೆ ಅಪ್ಪನ ಪೂಜೆ
ಮುಗಿಯಲಿ ಅಂತ ಕಾಯ್ತಾ ಸ್ವಲ್ಪ ಹೊತ್ತು ಮಲಗಿದಾಗ ತಲೆ ನೇವರಿಸ್ತ ಇದ್ಯಲ್ಲ ಅದೇ ಸ್ಪರ್ಶಕ್ಕಾಗಿ
ಮನ ಹಾತೊರೆಯುತ್ತಿದೆ..ಹೇಳಿಕೊಳ್ಳ ಬೇಕು ಅನ್ನೋ
ಎಷ್ಟೋ ಮಾತುಗಳು ಗಂಟಲಲ್ಲೇ ಹೆಪ್ಪುಗಟ್ಟಿ ಕುಳಿತು ಆಗಾಗ ಕಣ್ಣೀರಾಗಿ ಹೊರಕ್ಕೆ
ದುಮ್ಮಿಕ್ಕುತ್ತಿವೆ...ನಿನಗೆ ಹೇಳಬೇಕಾದ ಮಾತುಗಳಿವು ..ಇನ್ಯಾರ ಬಳಿ
ಹೇಳಿಕೊಳ್ಳಲಿ..ಹೇಳಿಕೊಂಡರೂ ನೀ ಕೊಡೊ ಸಾಂತ್ವಾನ ಯಾರು ತಾನೆ ನಿಡೋಕೆ ಸಾಧ್ಯ...ಆಯೀ ನೀ ಇಷ್ಟು
ಬೇಗ ನಮ್ಮನ್ನು ಬಿಟ್ಟು ಹೋಗಬಾರದಿತ್ತು ..ಎಷ್ಟು ಚನ್ನಾಗಿ ಆರೋಗ್ಯವಂತಳಾಗಿಯೇ ಇದ್ದ ನೀನು ಹೀಗೆ
ಮಾಡಿದ್ದು ಸರಿಯಾ...ರಾತ್ರಿ ಮಲಗಿದ ನೀನು ಬೆಳಿಗ್ಗೆ ಯಾಕೆ ಎದ್ದೆಳಲೇ ಇಲ್ಲ...ಆಯೀ ಆ ದಿವಸ ನಾ
ಮರೆಯುವದಾದರೂ ಹೇಗೆ...ಅರ್ಜುನನ ಲೆಕ್ಕದ ಹೋಮಕ್ಕಾಗಿ ನಿನ್ನ ಕರೆಯಲೆಂದು ಊರಿಗೆ ಬಂದೆ..ಯಾಕೋ
ಬರುವಾಗಲೇ ಅನೇಕ ತೊಂದರೆ ಮನಸ್ಸಿಗೆ ಕಸಿವಿಸಿ. ಗೊತ್ತಿಲ್ಲ.. ಮಂಗಳೂರು ಬಳಿ ಕಾರ್ ಕೆಟ್ಟಿ
ನಿಂತಿದ್ದು...ಮತ್ತೆ ಸರಿ ಮಾಡಿಸಿಕೊಂಡು ಹೊರಟಾಗ ಮಧ್ಯಾಹ್ನವಾಗಿತ್ತು....ಬ್ರಹ್ಮಾವರ ದ ಹತ್ತಿರ
ಮತ್ತೆ ಕಾರ್ ಕೈ ಕೊಟ್ಟಿದ್ದು...ಆಮೇಲೆ ಅಲ್ಲಿಂದ ಹೊರಟಾಗ ಕತ್ತಲೆ ಆಗೋದರಲ್ಲಿತ್ತು...ನಿನ್ನ
ನೋಡಲು ಬರುವ ಮೊದಲೇ ಕೊಲ್ಲೂರ ದೇವಿ ದರುಶನ ಮಾಡಿ ಬರಬೇಕೆಂಬ ಬಯಕೆ ಕೈ ಗೂಡಲೇ ಇಲ್ಲ...ಅಂತೂ ಮನೆ
ತಲುಪಿದಾಗ ರಾತ್ರಿಯೇ ಆಗಿತ್ತಲ್ಲ...ನೀನು ನಗುತ್ತ ಬಾಗಿಲಲ್ಲಿ ಕಾಯುತ್ತ ನಿಂತಿದ್ದು ಇಂದಿಗೂ
ಕಣ್ಣಿಗೆ ಕಟ್ಟಿದಂತಿದೆ...ಅಂತು ಊಟಮಾಡಿ ಮಾತಾಡಿ ಮಲಗಿದಾಗ ಮಧ್ಯ ರಾತ್ರಿ ಕಳೆದಿತ್ತು..ಮಾರನೇ
ದಿನವೇ ನಿನಗೆ ನಮಸ್ಕರಿಸಿ ಹೊರಡುವಾಗ ಅದೇನೋ ನಿನ್ನ ಮುಖದಲ್ಲಿ ವಿಶೇಷ ಕಳೆ ನೋಡಿ
ಬೆರಗಾಗಿದ್ದೆ..ಮೈಯ್ಯಲ್ಲಿ ಸ್ವಲ್ಪ ಇಳಿದಿದ್ದರೂ ಮುಖದಲ್ಲಿ ಮಾತ್ರ ಸಾಕ್ಷಾತ್ ದೇವರ ಕಳೆ
ಕಂಡೆ..ಆಗಲೇ ನನಗೆ ಎಲ್ಲಿಂದಲೋ ಸೂಚನೆ ಸಿಕ್ಕಿತ್ತು ನಿನಗಿದು ನನ್ನ ಕೊನೆ ನಮಸ್ಕಾರ ಎಂದು.....ಅದನ್ನೇ
ದಾರಿಯಲ್ಲಿ ಗಂಡನಿಗೆ ಹೇಳಿ ಬೈಸಿಕೊಂಡಿದ್ದೆ ಕೂಡ..ಅಷ್ಟು ಆರೋಗ್ಯವಾಗಿ ಮೊದಲಿಗಿಂತ ಚನ್ನಾಗಿ
ಕಾಣುತ್ತಿದ್ದಾರೆ ಏನು ಅಂತ ಹೇಳ್ತಿಯ ಅಂತ..ಆದರೆ ಆಯೀ ನಾ ನಿನ್ನ ಮಗಳು..ನಿನ್ನ ಮುಖದ ಬದಲಾವಣೆ
ನನಗೆ ಬೇರೆ ಸಂದೇಶವನ್ನೇ ನೀಡಿತ್ತು.....ಮಾರನೇ ದಿನ ಊರಿಂದ ನಿನಗೆ ಹುಷಾರಿಲ್ಲ ತಲೆನೋವಿಂದ
ಒದ್ದಾಡಿದೆ ಸ್ವಲ್ಪ ಹೊತ್ತು ಅಂದಾಗಲೇ ನನ್ನಲ್ಲಿ ಆತ್ಮ ಸ್ಥೈರ್ಯ ಕುಸಿದಿತ್ತು....ಮತ್ತೆ ನೀನು
ಆರೋಗ್ಯವಾದೆ ಅನ್ನೋ ವಿಷಯ ತಿಳಿದು ಸಮಾಧಾನಗೊಂಡೆ.....ನಾನು ನಿನ್ನ ನೋಡಲು ಬಂದಿದ್ದು ಶುಕ್ರವಾರ
ಆದರೆ ಅದರ ಮುಂದಿನ ಶುಕ್ರವಾರ ಅಂದರೆ ಒಂದೇ ವಾರ ದಲ್ಲಿ ನೀ ನನ್ನ ಬಿಟ್ಟು ಕಾಣದ ಲೋಖಕ್ಕೆ
ಹೋಗಿದ್ದೆ..ಬೆಳಿಗ್ಗೆ ಅಣ್ಣ ನಿಂದ ಫೋನ್ ಬಂದಾಗಲೇ ಆ ಶಬ್ದವೇ ಮೇಲೆ ಮಲಗಿದ ನನಗೆ ಯಾರೂ
ಬಾಯಿಬಿಟ್ಟು ಹೇಳುವ ಮೊದಲೇ ವಿಷಯ ಸಾರಿತ್ತು ಇದು
ಹೇಗೆ ಅಂತ ಗೊತ್ತಿಲ್ಲ....ಆದರೆ ಆಯೀ ಯಾರೂ ಹೇಳೋ
ಮುಂಚೆನೇ ನಾನೂ ಅಳುತ್ತ ಕೆಳೆಗೆ ಬಂದಿದ್ದೆ....ನೀನಗೆ ರಾತ್ರಿ ಮಲಗಿದಲ್ಲೇ ಬ್ರೇನ್ ಹೆಮರೆಜ್
ಆಗಿದೆ ಅನ್ನೋ ಸುದ್ದಿ ಕೇಳಿ ನಿಂತಲ್ಲೇ ಕುಸಿದಿದ್ದೆ..ಹೃದಯ ಕಿತ್ತು ಬರುವಷ್ಟು ಅತ್ತಿದ್ದೆ
ಕೂಡ...ತಕ್ಷಣ ಊರಿಗೆ ಬಂದು ನಿನ್ನ ನೋಡಿದ್ದು ಮಾತ್ರ ಜೀವಂತವಾಗಿ ಅಲ್ಲ....ನೀ ನನ್ನ ಮಗನ
ಲೆಕ್ಕದ ಹೋಮಕ್ಕೆ ಬರಲೇ ಇಲ್ಲ..ಪಾಪ ಅಪ್ಪ ಒಬ್ಬರೇ ಬಂದು ನಿಂತಾಗ ಕರುಳ ಕತ್ತರಿಸಿದಷ್ಟು
ನೋವಾಗಿತ್ತು...ಯಾವಾಗಲೂ ಹೇಳುತ್ತಿದ್ದೆಯಲ್ಲ ಯಾರ ಬಳಿಯೂ ತೊಟ್ಟು ನೀರೂ ಕೇಳದೇ
ಗಟ್ಟಿಯಾಗಿರುವಾಗಲೇ ಹೋಗಿ ಬಿಡಬೇಕೆಂದು...ನಿನ್ನ ಇಷ್ಟದಂತೆ ಆಯಿತು ಆಯೀ ನೀನು ಸುಖಿ ಆದರೆ
ನಿನ್ನ ಕಳೆದುಕೊಂಡ ನಾನು ಅನಾಥೆ....ನನಗೂ ನಿನ್ನಂತದ್ದೆ ಸಾವು ದೇವರು ಕರುಣಿಸಿದರೆ ನಾನು
ಆತನಿಗೆ ಚಿರ ಋಣಿ....ಬೇಡ ಬೇಡ ಎಂದರೂ ಬಾಲ್ಯದ ನೆನಪು ಯಾಕೋ ಮರುಕಳಿಸುತ್ತೆ...ನಾವು ನಿನ್ನ
ಕಣ್ಣು ತಪ್ಪಿಸಿ ಈಜೋಕೆ ಹೋದಾಗ ನೀನು ಬೆತ್ತ ಹಿಡಿದು ಅಲ್ಲಿಂದ ಹೊಡೆದು
ತರುತ್ತಿದ್ದದ್ದು..ಹುಡುಗರಂತೆ ಗುಂಪು ಕಟ್ಟಿ ಗುಡ್ಡ ತಿರುಗ್ತಾ ಇರ್ತೀನಿ ಅಂತ
ಬೈತಿದ್ದದ್ದು...ನನ್ನ ಮಗಳು ಎಷ್ಟು ಚಂದ ಎಲ್ಲಿ ಕಿಡ್ನಾಪ್ ಮಾಡ್ಬಿಡ್ತಾರೋ ಅಂತ ಸ್ವಲ್ಪ ಲೇಟ್
ಆದರೂ ಕಾತುರದಿಂದ ಕಾಯ್ತಾ ಇದ್ದಿದ್ದು...ರಾತ್ರಿ ಮಲಗುವಾಗ ನಿನ್ನ ಪಕ್ಕದಲ್ಲೇ ಆಗಬೇಕು ಆದರೆ
ಒಂದು ಕೈ ಅಂತರದಲ್ಲಿ ಇರಬೇಕು ಅಂತ ಹಾಸಿಗೆ ಹಾಸಿ ಕೈಯಿಂದ ಅಳೆಯುತ್ತ ನಿನ್ನ ಹತ್ತಿರ ಬೈಸಿಕೊಂಡಿದ್ದು...ನೀನೇ ನನ್ನ ಬಾಣಂತನ
ಮಾಡಿದ್ದು...ನಿನ್ನ ಮೊಮ್ಮಕ್ಕಳನ್ನ ಮುದ್ದು ಮಾಡಿದ್ದು...ಎಲ್ಲಾ ಹಸಿ ಹಸಿ ನೆನಪಾಗಿ
ಕಾಡುತ್ತಿವೆ ಆಯೀ....ಯಾಕೋ ನಿನ್ನ ಮಡಿಲಲ್ಲಿ ಮಲಗುವಾಸೆ ಕನಸ್ಸಲ್ಲಾದರೂ ಬಂದು ಒಮ್ಮೆ ನನ್ನ ತಲೆ
ನೇವರಿಸಿ ಬಿಡು....ನನಗೆ ಸಂತ್ವಾನ ಹೇಳು ..ಕಾಯುತ್ತಿರುವೆ..ಬರುತ್ತಿಯಲ್ಲವಾ..ಈ ನಿನ್ನ ಕೊನೆ
ಮಗಳನ್ನ ನೋಡಲು...
ನೀ ನನ್ನ ನೆನಪಿಸಿಕೊಂಡಾಗೆಲ್ಲ ನನ್ನ ಮನದಲ್ಲೇನೋ ಹೆದರಿಕೆಯ ಹಿತವಾದ ಕಂಪನ.... ನಾ ನೆನಪಿಸಿಕೊಂಡಾಗ ನಿನಗೂ ಹಾಗೆಯೇ......?
ನಾ ರಾಧೆಯಾಗ ಬೇಕೆಂದರೆ ನೀ ಕೃಷ್ಣ ನಾಗಬೇಕು ಆದರೆ ನನಗೆ ರಾಮನಲ್ಲೇ ಭಕ್ತಿ ... ಸದಾ ಗೋಪಿಯರ ನೋಡುವ ಕೃಷ್ಣ ನಲ್ಲಲ್ಲ ....
Saturday, 13 September 2014
ನಿನ್ನ ನೆನಪಿನ ಘಂಟು ಹೆಗಲಲ್ಲೇ ಇರುವಾಗ ನೀ ಬಿತ್ತಿದಾ ಕನಸು ಕಣ್ಣಲ್ಲೇ ಇರುವಾಗ ನೀ ತೊಡಿಸಿದಾ ನಗುವು ತುಟಿಯಲ್ಲೇ ಇರುವಾಗ ನಾ ಹೇಗೆ ಒಂಟಿ...?
Saturday, 6 September 2014
ಆಡಿಸುವಾತ ಅದೆಲ್ಲಿಹನೋ..... ಆಟ ಮುಗಿಸಲು ಅದ್ಯಾಕೆ ಮರೆತಿಹನೋ ದಿಗಂತದತ್ತ ನೋಟ ಹರಿಸಿ ತೀರದಿ ನಿಂತು ಕಾಯುತಿಹೆನು ನನ್ನ ಸರದಿಗೆ....
ಕಳೆದುಕೊಂಡಿದ್ದನ್ನ ಪಡೆವೆ ಎಂಬ ಖುಷಿಯಲ್ಲಿದ್ದೆ ಇನ್ನೇನು ಕೈಗೆ ಎಟಕುವದರಲ್ಲಿತ್ತು ಅದಾವ ಗಾಳಿ ಅಡರಿತೋ ಕಾಣೆ ಮಂಜಂತೆ ಮರೆಯಾಯ್ತು .... ಕೊನೆಯ ಭರವಸೆ ಎಳೆಯೂ ಕಳೆಯುತ್ತಿದೆಯೆಂಬ ಭಾವ ಉಳಿದದ್ದು ನೆನಪಿನ ನಿಟ್ಟುಸಿರೊಂದೆ
ಈ ಹೃದಯ ಎನ್ನುವದು ನೀ ಕುಳಿತ ಸಿಂಹಾಸನ ಇಲ್ಲಿ ಬೇರೆಯವರಿಗೆಲ್ಲ ಪ್ರವೇಶ ನಿಷಿದ್ಧ ಪ್ರೀತಿ ಎಂದರೆ ಇಷ್ಟೆ ಎರಡು ಮನಗಳ ಮಿಳಿತ ಎರಡು ಹೃದಯದ ಬಡಿತ ಎರಡು ದೇಹಗಳ ಸೆಳೆತ... ಹೀಗಿರಲು ಪರರಿಗೆಲ್ಲಿದೆಯೋ ಜಾಗ... ಎಂದೆಂದಿಗೂ ಅದು ನಿನಗೇ ಮೀಸಲು...ನೀ ಬಂದರೂ ..ಬಾರದಿದ್ದರೂ