Tuesday, 25 February 2014

ವಿಶ್ರಾಂತಿ 
ನಾನು ನನ್ನೊಳಗಿಲ್ಲ ನಿನ್ನೊಳಗೂ ಇಲ್ಲ
ಕಳೆದೇ ಹೋಗಿಹೆ ಇಹದ ಪರಿವೆಯಿಲ್ಲದೆ ಎಲ್ಲೋ 
ಎಲ್ಲವೂ ಖಾಲಿ ಖಾಲಿಯೀಗ ನಡೆದಷ್ಟೂ ದೂರ ಬಟ್ಟಾ ಬಯಲು 
ನೆಟ್ಟಿಹುದು ನೋಟವೀಗ ಶೂನ್ಯದಲ್ಲಿ 

ಹುಡುಕಿ ಪಡೆವುದೇನಿದೆ ಇನ್ನು 
ಅದೇ ಸಿಮಿತದ ವೃತ್ತದಲ್ಲಿ 
ಅರಿತ ಮನ ಕಾತರಿಸದಿನ್ನು ಜಡವಾಗಿದೆ 
ಬೆಳೆದ ಹಸಿರು ಹುಲ್ಲಾಗಿದೆ ಮರಳು ಬಿಸಿಲಿನಲ್ಲಿ 

ಕಂಡೆ ದೂರದಲಿ ನೀರೆಂಬ ಆಸೆ
ಹತ್ತಿರದಿ ಕೈಯ್ಯೊಡ್ಡುವಾಗ
ಮರಳುಗಾಡಿನ ಬಿಸಿಲ್ಗುದುರೆ
ಮನ ಮೋಸ ಮಾಡಿತ್ತು ಭ್ರಮೆಯ ರೂಪದಲಿ

ಮುಸ್ಸಂಜೆ ಬಂದಾಯ್ತು
ಬೆಳಕಿಗಿಂತ ಕತ್ತಲೆಗೇ ಹತ್ತಿರ
ಅಲೆದು ದಣಿದಿದೆ ಜೀವ ನಿಟ್ಟುಸಿರಿಟ್ಟು
ಬಯಸಿ ಅಪ್ಪುತಿದೆ ವಿಶ್ರಾಂತಿಯನ್ನು..

No comments:

Post a Comment