Thursday, 30 May 2013

ಹೃದಯ ರಾಗ

ಎಸೆದು ಹೊರಟ ಕೊಳಲನೆತ್ತಿ
ಮತ್ತೆ ನುಡಿಸಿದೆ
ಶೃತಿಯು ಯಾಕೋ ಸೇರಲಿಲ್ಲ
ಭಾವ ಸೆಲೆಯಲಿ

ಕೊರಳು ಉಬ್ಬಿ ಮನವ ತಬ್ಬಿ
ಉಸಿರಿಗೂ ಕಷ್ಟ
ಸಾಧನೆಯೇನೊ ಸಡೆಸುತ್ತಿತ್ತು
ದುಃಖ ತಪ್ತ ಚಿತ್ತ

ಹಾಡುಯೇನೊ ರಾಗವೇನೊ
ಲಯವ ತಪ್ಪಿದೆ
ಮನವು  ಎಲ್ಲೋ ಕಳೆದು ಹೋಗಿ
ಹೃದಯ ದ್ರವಿಸಿದೆ


ಖುಷಿಯ ರಾಗ ಹೇಗೆ ಸಾದ್ಯ
ಮುರಿದ ಹೃದಯದಿ
ಶೋಕ ರಸವೇ ಹೊಮ್ಮುತಿತ್ತು
ಬೆಂದ ಮನದಲಿ,ಈ ಎಸೆದ ಕೊಳಲಲಿ

Saturday, 25 May 2013

ನಾನು ಮತ್ತು ಪಾರಿಜಾತ
ಇರುಳಲಿ ಅರಳಿ 
ಹಗಲಲಿ ಮುದುಡಿ 
ತೊರೆಯುವೆಯೇಕೆ ಅಮ್ಮನ ಮಡಿಲ 
ಒಂದು ರಾತ್ರಿಯೇ ನಿನಗೆ ಆಯಸ್ಸು 

ಇದ್ದರೇನಂತೆ ದೀರ್ಘಾಯಸ್ಸು 
ನನಸಾಗದೆ, ಉಳಿದರೆ ಕನಸು 
ನನ್ನಿಯನ ಜೊತೆ ರಾತ್ರಿಯ ಕಳೆವೆ 
ಅರಳಿ ಸುಖದಲಿ ನಾ ಸಾರ್ಥಕತೆ ಪಡೆವೆ 

ಚಂದ್ರನ ಕಂಡು ನಗುತೊರುವೆ ನೀ
ಎಲ್ಲೆಲ್ಲಿಯೂ ಹರಡುವೆ ಮರಿಮಳವ
ರವಿಯನು ಕಂಡರೆ ಮುಖ ಬಾಡಿಸುವೆ
ನಿನಗೇತಕೆ ಅವನಲಿ ಮುನಿಸು

ಚಂದ್ರನ ಅಂದ ರವಿಯಲಿ ಇಲ್ಲ
ತಂಪನು ಸುರಿದು ಅವ ರಮಿಸೊಲ್ಲ
ಶಾಖದ ಝಳಕ ನನಗಾಗಲ್ಲ
ಸೋಕ್ಷ್ಮವೇ ತಿಳಿಯದ ಅವನಲಿ ಮನಸಿಲ್ಲ

Sunday, 12 May 2013

ಬದುಕು 
ನಿನ್ನ ನಡತೆ ಮಾಡುವುದೊಮ್ಮೊಮ್ಮೆ 
ಧರಿಸುವಂತೆ ಕೋಪವೆಂಬಾಭರಣ
ಮನದಲುದ್ಭವಿಸಿ ಹರಿಯುವದು ತೊರೆಯಂತೆ 
ಮೂಕರೋಧನ ದಾಟಿ ಕಣ್ಣಿನಾವರಣ 
ಏನು ಮಾಡಲಿ ಹೇಳು ನಿನಗೇ ಗೊತ್ತು
ಧರಿಸಿರಲಾರೆ ನಾ ಅದನು ತುಂಬಾ ಹೊತ್ತು

ಹೃದಯ ಚುಚ್ಚುವದು ಕ್ಷಮಿಸಿ ಬಿಡು ಅವನನ್ನು
ಬಾಳಲ್ಲಿ ಜೊತೆಜೊತೆಗೆ ಹೆಜ್ಜೆ ಇರಿಸಿದವನು
ಪ್ರೀತಿಯಾ ಹೊಳೆ ಹರಿಸಿ ನಿನ್ನದೇ ಆದ ಜೀವ
ಬದಲಿಸಿಕೊ ಕೋಪವನು ಬೆರೆಸಿ ಕುಷಿಯ ಭಾವ
ಧರಿಸಿಬಿಡು ತನುಮನದಿ ನಗುವಿನಾಭರಣ
ಹೊಂದಾಣಿಕೆಯ ಮಂತ್ರವೇ ಬದುಕಿಗೆ ಹೂರಣ

Sunday, 5 May 2013

ಅಂಬರ 
ಕಡು ನೀಲಿ ಸೀರೆಗೆ 
ಚಿನ್ನದ ಚುಕ್ಕಿ ಇಟ್ಟಂತೆ 
ಕಂಗೊಳಿಸುತಿದೆ ಅಂಬರ 
ಕಣ್ಣರಳಿಸಿ ನೋಡಲು 
ಅದರ ನಯ ನಾಜೂಕು 
ಆಹಾ ಎಂತ ಸುಂದರ 
ಯಾರು ಹಚ್ಚಿದರೋ ಆ ಚುಕ್ಕಿ 
ಮೈಎಲ್ಲಾ ನಿನಗೆ 
ಎಷ್ಟೇ ಹುಡುಕಿದರೂ ಸಿಗಲಿಲ್ಲ 
ಅಂತಹ ಸೀರೆ ನನಗೆ