Friday, 21 June 2013

ಒಂಟಿ ನಕ್ಷತ್ರ

ಮೋಡದ ಮರೆಯಲ್ಲಿ ಇಣುಕುತಿದೆ
ಒಂಟಿ ನಕ್ಷತ್ರವೊಂದು 
ತೋರುತಿದೆ ಬಾಗಿಲ ಸೆರೆಯಲಿ
ನಾಚಿನಿಂತ ಹೆಣ್ಣಿನಂತೆ
ಕಾಯುತಿರುವಂತಿದೆ ಇನ್ನೂ ಬಾರದ ಗೆಳೆಯನಿಗೆ
ಹುಸಿಮುನಿಸ ತೋರಿದಂತಿದೆ
ನಗು ಚಲ್ಲುವಾ ಚಂದ್ರಮನಿಗೆ
ಮರೆಯಾಗಿ ಹೋಗಿಹಳು
ಮತ್ತೆ ತಲೆಯೆತ್ತ್ತಿನೋಡೋ ಹೊತ್ತಿಗೆ
ಕಾದು ಬೇಸರವಾಯ್ತೇನೋ ಪ್ರಿಯತಮನಿಗೆ
ಸುತ್ತಲೂ ಆವರಿಸುತಿದೆ 
ಕಾರ್ಮೋಡ ಕಗ್ಗತ್ತಲಿನಂತೆ
ಒಂದೊಂದೇ ಹನಿ ಇಳಿಯತೊಡಗಿತು
ಇವಳ ಕಣ್ಣೀರಿನಂತೆ.

Wednesday, 19 June 2013

ವಿದಾಯ 
ಮರಳಿ ಬಾರದಿರಿ ತಿರುಗಿ ಕಾಡದಿರಿ 
ಹೊರಟುಬಿಡಿ ಮುಖ ತಿರುವಿ 
ಓ ನನಸಾಗದ ಕನಸುಗಳೆ 
ಸ್ಮಶಾನದೆಡೆಗೆ 

ನೀವೆಲ್ಲ ಬಂಧನ ಮುಕ್ತರಿಂದು 
ಕಡಿದಿದೆ ಸಂಕೋಲೆಯಿಂದು 
ಹಾರಿಬಿಡಿ ಸರತಿಯಲಿ 
ಉರಿವ ಚಿತೆಗೆ 

ತಪ್ಪಿಯೂ ಕೂಗದಿರಿ
ರಕ್ಷಿಸಲಾರೆ ನಾ ನಿಮ್ಮ
ನಾನಿಲ್ಲಿ ನಿಶ್ಯಕ್ತ ಹೊರದಾರಿ ಕಾಣದಿಹ
ಚಕ್ರವ್ಯೂಹದ ಬಂಧಿ

ಚಿಗುರಲಾರಿರಿ ನೀವಿಲ್ಲಿ
ಇದು ನೀರೇ ಕಾಣದ ಮರಳುಗಾಡು
ಬದುಕಿಸಲಾರೆ ನಾ ನಿಮ್ಮ
ಹಾಳೂರ ಒಡತಿ ನಾನು

ಇನ್ನೊಂದು ಜನ್ಮವಿದ್ದರೆ ಕರೆವೆ
ಬಂದು ಹೂವಾಗಿ ಅರಳುವಿರಂತೆ
ಕ್ಷಮಿಸಿ ಕೊಂಡೊಯ್ದುಬಿಡಿ ಜೊತೆಯಲ್ಲಿ
ಈ ಕಣ್ಣೀರ ಕಾಣಿಕೆ