Tuesday, 25 February 2014

ವಿಶ್ರಾಂತಿ 
ನಾನು ನನ್ನೊಳಗಿಲ್ಲ ನಿನ್ನೊಳಗೂ ಇಲ್ಲ
ಕಳೆದೇ ಹೋಗಿಹೆ ಇಹದ ಪರಿವೆಯಿಲ್ಲದೆ ಎಲ್ಲೋ 
ಎಲ್ಲವೂ ಖಾಲಿ ಖಾಲಿಯೀಗ ನಡೆದಷ್ಟೂ ದೂರ ಬಟ್ಟಾ ಬಯಲು 
ನೆಟ್ಟಿಹುದು ನೋಟವೀಗ ಶೂನ್ಯದಲ್ಲಿ 

ಹುಡುಕಿ ಪಡೆವುದೇನಿದೆ ಇನ್ನು 
ಅದೇ ಸಿಮಿತದ ವೃತ್ತದಲ್ಲಿ 
ಅರಿತ ಮನ ಕಾತರಿಸದಿನ್ನು ಜಡವಾಗಿದೆ 
ಬೆಳೆದ ಹಸಿರು ಹುಲ್ಲಾಗಿದೆ ಮರಳು ಬಿಸಿಲಿನಲ್ಲಿ 

ಕಂಡೆ ದೂರದಲಿ ನೀರೆಂಬ ಆಸೆ
ಹತ್ತಿರದಿ ಕೈಯ್ಯೊಡ್ಡುವಾಗ
ಮರಳುಗಾಡಿನ ಬಿಸಿಲ್ಗುದುರೆ
ಮನ ಮೋಸ ಮಾಡಿತ್ತು ಭ್ರಮೆಯ ರೂಪದಲಿ

ಮುಸ್ಸಂಜೆ ಬಂದಾಯ್ತು
ಬೆಳಕಿಗಿಂತ ಕತ್ತಲೆಗೇ ಹತ್ತಿರ
ಅಲೆದು ದಣಿದಿದೆ ಜೀವ ನಿಟ್ಟುಸಿರಿಟ್ಟು
ಬಯಸಿ ಅಪ್ಪುತಿದೆ ವಿಶ್ರಾಂತಿಯನ್ನು..

Saturday, 8 February 2014

ಸ್ನೇಹ ..

ನೀ ಕರೆದಾಗೆಲ್ಲ ಓ ಎಂದು ಮುದ್ದಿಸಿ ರಮಿಸಲು ನಾ ನಿನ್ನ ಹೆಂಡತಿಯಲ್ಲ 
ನಿನ್ನ ಬೈಗುಳವ ತಿಂದು,ತಪ್ಪನೆಲ್ಲ ಒಡಲಲ್ಲಿಟ್ಟು ನಗಲು ನಾ ನಿನ್ನ ತಾಯಿಯಲ್ಲ 
ನಿನ್ನ ಕನಸಿಗೆ ಲಗ್ಗೆ ಇಟ್ಟು ನಿದಿರೆಯ ಕದ್ದೊಯ್ಯಲು ನಾ ನಿನ್ನ ಪ್ರೇಮಿಯಲ್ಲ 
ನಿನ್ನ ಸುಖದಲಿ ನಕ್ಕು ಕಷ್ಟದಲಿ ಕಣ್ಣೀರೊರೆಸಿ ಶುಭವನ್ನೇ ಹಾರೈಸುವ ನಾ ನಿನ್ನ ಸ್ನೇಹಿತೆ ......

Monday, 9 December 2013

ಅವಸರವೇಕೆ.... 

ನೀನೆ ಬರೆದ ಚಿತ್ರಗಳಲ್ಲವೇನೋ ಗೆಳೆಯಾ 
ಈಗೇಕೆ ಮಾಡುತಿಹೆ ಅಳಿಸುವ ವ್ಯರ್ಥ ಪ್ರಯತ್ರ್ನವಾ 
ಬಣ್ಣ ತುಂಬುವಲ್ಲಿ ನೀನು ಸೋತರೆನಂತೆ ಉಳಿಯಲು ಬಿಡೋ 
ಕಪ್ಪು ಬಿಳುಪಿನ ಚಿತ್ರವಾಗಿ ಮನಸಿನಾ ಪಟದಲಿ

ಕನಸಿನಾ ಚಿತ್ರಗಳಿವು ಓರೆ ಕೋರೆ ಸಹಜ ಕಣೋ
ತಪ್ಪನೆತ್ತಿ ತೋರಿಸಲು ನಾನೇನು ಪ್ರವೀಣ ಚಿತ್ರ ಕಾರಳಲ್ಲ
ಅಸ್ವಾಧಿಸಲು ಬಿಡೊ ನನಗೆ
ಬರೆದ ಆ ಕೈಗಳ ಹಿಂದಿನಾ ಪ್ರೀತಿಯಾ

ಬಿಡಿಸಿಯಾದ ಚಿತ್ರಗಳ ನೆನೆದು ಕೊರಗಲೇ ಬೇಡ
ನಡೆಯುವಾಗ ಎಡವುದು ಸಹಜ ತಾನೆ
ತಪ್ಪು ಅರಿವಾದಲ್ಲಿ ಸಹನೆಯಲಿ ಕಾಯೊ
ತಿದ್ದುಪಡಿ ಸಾಧ್ಯ ಮುಂದೆ ನೀ ಬರೆವ ಚಿತ್ರದಲಿ

ಸಾಧ್ಯವಾದರೆ ಮುಂದೊಂದುದಿನ ಬಣ್ಣಗಳ ಬಳಿದು ಬಿಡು
ಓರೆಕೋರೆಗಳೆಲ್ಲಾ ಮುಚ್ಚಿ ಮೆರೆವುದಾಗ ನೋಡು
ಇಲ್ಲಿ ಬೆಲೆ ಬರೆ ಆಢ೦ಬರಕೆ ಇರುವಾಗ
ವ್ಯವಧಾನವಿಲ್ಲ ಆಲಿಸಲು ಬಣ್ಣದ ಹಿಂದಿನ ನಿನ್ನ ಮೂಕ ರೋದನವ

Saturday, 9 November 2013

ನೆನಪು 
ನಿನ್ನ ನೆನಪು ಕೈಬೀಸಿ ಕರೆವುದು 
ಏಕಾಂತದಲಿ ನಾ ಕುಳಿತಿರಲು 
ಹರುಷದೊನಲು ಉಕ್ಕಿಉಕ್ಕಿ 
ಧಮನಿಗಳಲಿ ಹರಿವುದು.

ನಿನ್ನ ಮುಖವು ತೇಲಿಬಂದು 
ಮಧುರನಗುವಲಿ ಸೆಳೆವುದು 
ಕಣ್ಗಳೆರಡು ತುಂಟತನದಿ 
ಏನೋ ಕೇಳುತಿರುವದು 

ನಿನ್ನ ಪಿಸು ಮಾತಿನಲೆಯ
ಗಾಳಿ ತಂದು ಉಲಿವುದು
ಮೂಡಿ ಮನದಿ ಮಧುರ ಕಂಪನ
ನಾಚಿಕೆ ಪೊರೆ ಹೊದೆವುದು.

Tuesday, 5 November 2013

ಮುಂಜಾವು..

ರವಿಯು ರಥದಿ ಏರಿ ಬರಲು 
ತೋಟದಲ್ಲ್ಲಿ ಹೂವು ನಗಲು 
ಬೃಂಗ ಗಾನ ಹಾಡುತಿರಲು 
ಕರ್ಣ ಪಾವನ 

ಮಂದ ಪವನ ಬೀಸುತಿರಲು 
ತರು ಲತೆಗಳು ನರ್ತಿಸಿರಲು 
ಸುಗಂಧವದು ಪಸರಿಸಿರಲು 
ಸ್ವರ್ಗ ಸಮಾನ

ರವಿಯ ಸ್ಪರ್ಶಕೆ ಇಳೆಯು ನಗಲು
ನಾಚಿದ ಕಪೋಲದಿ ರಂಗು ಏರಲು
ಭೂ ರಮೆಯು ನವ ವಧುವೇ ಆಗಲು
ಶೃಂಗಾರ ಮನ

Tuesday, 22 October 2013

ನಾ ನಿನ್ನ ಮರೆಯುವದಾದರೂ ಹೇಗೆ....

ಭಾನುವಾರ, ಅಂದೂ ಹೀಗೆ ಧಾರಾಕಾರ ಮಳೆ ಸುರಿಯುತ್ತಿತ್ತು. ನಾನಾಗ ಕಾಲೇಜ್ ಓದುತ್ತಿದ್ದೆ. ನಾನು ಆಡಿ ಓದಿ ಬೆಳೆದಿದ್ದು ಒಂದು ಪುಟ್ಟ ಹಳ್ಳಿಯಲ್ಲಿ. ಆಗ ನಮ್ಮೂರಿಗೆ ಬಸ್ಸಿನ ಸೌಕರ್ಯವಿರಲಿಲ್ಲ.ಕಾಲೇಜಿಗೆ  ಹೋಗಬೇಕೆಂದರೆ ಸುಮಾರು ೨ ಮೈಲಿ ನಡೆದುಹೋಗಿ ಬಸ್ಸು ಹಿಡಿದು ಹೋಗಬೇಕಿತ್ತು. ನಡೆದು ಹೋಗಲು ಕೂಡ ಸರಿಯಾದ ರಸ್ತೆ ಇರಲಿಲ್ಲ  ಬದಲಾಗಿ ಹಲವಾರು ಮನೆಯ ಅಂಗಳ,ತೋಟಗಳ ನಡುವೆ ನಡೆದು ಮುಂದೆ ಹೋದಾಗ ರಸ್ತೆ ಸಿಗುತ್ತಿತ್ತು. ಆ ರಸ್ತೆಯ ತುದಿಯಲ್ಲಿ ಒಂದು ಬಸ್ ನಿಲ್ದಾಣ. ಎಸ್ಟೋ ಸಲ ರಸ್ತೆ ಬುಡದಲ್ಲಿ ಇರುವಾಗಲೇ ಬಸ್ ಗಳು ದೂಳೆಬ್ಬಿಸಿ ಹೋಗುವದನ್ನು ಅಸಹಾಯಕತೆಯಿಂದ ನೋಡಬೇಕಿತ್ತು. ನಾವು ನಿಲ್ದಾಣದ ವರೆಗೆ ಓಡಿದರು ತಲುಪೋ ವೇಳೆಗೆ ಬಸ್ಸು ಹೊರಟು ಹೋಗಿರುತ್ತಿತ್ತು. ಕೆಲವು ಡ್ರೈವರ್ ಗಳು ಹುಡುಗಿಯರ ಕಿರುನಗುವಿಗೆ ಶರಣಾಗಿ ಬಸ್ಸನ್ನು ಎಲ್ಲಿ ಬೇಕಾದರೂ ನಿಲ್ಲಿಸುತ್ತಿದ್ದರು. ಇದು ಹುಡುಗಿಯರಿಗೆ ದೇವರು ಕೊಟ್ಟ ಒಂದು ವರ ಅನ್ನಬಹುದೇನೊ. ಬಸ್ಸು ತಪ್ಪಿದ ದಿನ  ನಿಲ್ದಾಣದಲ್ಲಿ ಕಾಯುವಾಗ ನಮ್ಮೆಲ್ಲರ (ಒಂದೇ ಕಡೆಯಿಂದ ಬರುವಹುಡುಗಿಯರು) ಸುದ್ದಿಗಳಲ್ಲಿ ಬಂದು ಹೋಗೋ ಹಿರೋ ಅಂದರೆ ಗಜಾನನ.

 ಗಜಾನನ... ನಾ ನಿನ್ನ ಮರೆಯುವದಾದರೂ ಹೇಗೆ. ಕಾಲೇಜ್ ಗೆ ಹೋಗುವ ದಾರಿಯಲ್ಲಿ ಸಿಗುವ ಅನೇಕ ಮನೆಗಳಲ್ಲಿ ಈ ಗಜಾನನ ನ ಮನೆಯೂ ಒಂದು.ಗಜಾನನ  ಹಾಲು ಬಿಳುಪಿನ ಗುಂಗುರು ಕೂದಲಿನ ಹುಣ್ಣಿಮೆ ಚಂದಿರನ ಮುಖದ,ಅರಳು ಹುರಿದಂತೆ ಮಾತನಾಡುವ ಉತ್ಸಾಹದ ಚಿಲುಮೆಯಂತಿರುವ ಮುದ್ದು ಹುಡುಗ. ಆಗ ಅವನಿಗೆ ೩-೪ ವರುಷವಾಗಿತ್ತು. ದಿನಾಲೂ ಕಾಲೇಜ್ ಗೆ ಹೋಗುವಾಗ ಅಕ್ಕ ಅಂತ ಕರೆಯುತ್ತ  ಓಡೋಡಿ ಹೊರ ಚಾವಡಿಗೆ ಬರುತ್ತಿದ್ದ.ನಾನಂತೂ ೫ ನಿಮಿಷ ನಿಂತು ಅವನನ್ನು ಮುದ್ದು ಮಾಡದೇ ಹೋಗುತ್ತಲೇ ಇರಲಿಲ್ಲ. ಎಲ್ಲ ಹುಡುಗಿಯರ ಕಥೆಯು ಇದೇ ಆಗಿತ್ತು. ಅಂತಃ ಒಂದು ಆಕರ್ಷಣೆ ಗಜಾನನನಲ್ಲಿತ್ತು . ಒಮ್ಮೊಮ್ಮೆ ಕಾಲೇಜ್ ಗೆ ಹೊರಡುವಾಗ ತಡವಾಗಿ ಮಾತನಾಡದೆ ಹೋದರೆ ಆ ದಿನವೆಲ್ಲ ಅದೇನೋ ಮಂಕು ಕವಿದಂತೆ ಅನಿಸುತ್ತಿತ್ತು. ಅವನೂ ಕೂಡ ತಿಂಡಿ ತಿನ್ನುತ್ತಿದ್ದರೂ ಬಿಟ್ಟು ಓಡಿ ಬರುತ್ತಿದ್ದ. ಮನೆಗೆ ತಿರುಗಿ ಬರುವಾಗಲೂ ಅದೇ ದಾರಿ ಬಸ್ಸು ತಡವಾಗಿ ಬಂದದಿನ ಪಾಪ ಕಾದು ಕಾದು ಚಾವಡಿಯಲ್ಲೇ ಮಲಗಿಬಿಡುತ್ತಿದ್ದ. ಒಂದು ದಿನ ಕಾಲೇಜ್ ಗೆ ಹೋಗದಿದ್ದರೆ ಮಾರನೇ ದಿನ ನಿನ್ನೆ ಯಾಕೆ ಕಾಲೇಜ್ ಗೆ ಹೋಗಿಲ್ಲ ಅಕ್ಕಾ ನಿನಗೆ ಟೀಚರ್ ಕೋಲಲ್ಲಿ ಹೊಡೆಯೋಲ್ಲವ ಅಂತ ತನ್ನ ಮುದ್ದು ಮಾತಿನಿಂದ ವಿಚಾರಿಸುತ್ತಿದ್ದ.ಹೀಗೆ ಸಾಗುತ್ತಿದ್ದವು ದಿನಗಳು.

ಇವನ ಚುರುಕುತನ, ಆಟ  ಆ ದೇವರಲ್ಲೂ  ಹೊಟ್ಟೆಕಿಚ್ಚು ಹುಟ್ಟಿಸಿತೋ ಏನೋ  ಅಬ್ಬಾ ಅಂದು ಅದೆಂತಹ ಭೀಕರ ಮಳೆ.ಹೊಳೆ ಹಳ್ಳಗಳೆಲ್ಲಾ ತುಂಬಿ ಹರಿಯುತ್ತಿದ್ದವು.ನೀರಿನಲ್ಲಿ ಆಟವಾಡುವದೆಂದರೆ ಗಜಾನನನಿಗೆ ಪಂಚ ಪ್ರಾಣ.ಮನೆಯವರ ಕಣ್ಣು ತಪ್ಪಿಸಿ ಮನೆಯ ಮುಂದಿನ ತೋಟದ ತುದಿಯಲ್ಲಿ ಹರಿಯುತ್ತಿದ್ದ ಹೊಳೆಯ ಬಳಿ ಆಟ ಆಡಲು ಹೋಗಿದ್ದ.ವರುಣನ ಆರ್ಭಟಕ್ಕೆ ತುಂಬಿಹರಿದ ಗಂಗೆ ಉತ್ಸಾಹದ ಚಿಲುಮೆಯಾಗಿದ್ದ ಗಜಾನನ ನನ್ನು ತನ್ನ ಮಡಿಲಿಗೆ ಸೆಳೆದುಕೊಂಡುಬಿಟ್ಟಳು. ಉರಿದು ಬೆಳಗಬೇಕಿದ್ದ ದೀಪ ಕುಡಿಯಲ್ಲೆ ಕಮರಿತ್ತು.ಅಪ್ಪ ಅಮ್ಮನ ಮುದ್ದಿನ ಒಬ್ಬನೇ ಮಗನಾಗಿದ್ದ ಗಜಾನನ ನ ಪಾಲಿಗೆ ಆ ವಿಧಿ ಕ್ರೌರ್ಯ ಮೆರೆದಿತ್ತು. ಮಗನಿಂದ ಬೆಳಕಾಗಬೇಕಿದ್ದ ತಾಯಿ ತಂದೆಯರ ಬಾಳು ಕತ್ತಲಲ್ಲಿ ಬಿಕ್ಕಳಿಸಿತ್ತು. ಎಲ್ಲರ ಮನದಲ್ಲಿ ನೋವಿನ ಮೌನವನ್ನು ಹೆಪ್ಪುಗಟ್ಟಿಸಿ ತಾನು ಮಾತ್ರ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದ ಗಜಾನನ.
ಅಂದಿನಿಂದ ಅದೇನೋ ಈ ಭೀಕರ ಮಳೆ ನನ್ನ ಹೃದಯದಲ್ಲಿ ನೋವಿನ ಸಿಂಚನ ಗೈಯ್ಯುತ್ತಿದೆ . ಮನದಲ್ಲಿ  ಹೆಪ್ಪುಗಟ್ಟಿದ ನೋವು ಮೋಡದಂತೆ ಕರಗಿ ಗಂಗೆಯಾಗಿ ಕಣ್ಣಲ್ಲಿ ಪ್ರವಹಿಸಿದರೂ ಆ ನಿನ್ನ ನೆನಪು ಮತ್ತೆ ಮತ್ತೆ ಮೊಳಕೆಯೊಡೆವ ಹುಲ್ಲಿನಂತೆ ಮನದಲ್ಲಿ ಚಿಗುರಿ ನಿಲ್ಲುತ್ತವೆಯಲ್ಲೋ ಓ ಮುದ್ದು  
 ಗಜಾನನ... ನಾ ನಿನ್ನ ಮರೆಯುವದಾದರೂ ಹೇಗೆ.

Wednesday, 28 August 2013

ಹೀಗೇಕೆ ...

ನೇರ ಸರಳತೆಯಲಿ ಬದುಕಬೇಕೆನ್ನುವ ಮನಕೆ
ಬಲವಂತದಾ ಮುಖವಾಡ
ತರುವದದೆಷ್ಟು ಕಷ್ಟ..

ಕಿತ್ತೊಗೆಯ ಬೇಕೆನ್ನುವ ಹಠ ಒಂದೆಡೆ
ತೆಗೆದರಾಗುವ ಅನಾಹುತಕೆ
ಭಯದ  ಹುತ್ತ ಮತ್ತೊಂದೆಡೆ

ರೋಷದ ತುಡಿತದಲಿ ಕೈ ಮುಂದೆ ನುಗ್ಗುತಿರೆ
ವಿವೆಕತೆಯ ಪಾಠ ನಡುಗಿಸಿ ತಳ್ಳುತಿದೆ ಹಿಂದೆ
ಗಹಗಹಿಸಿದೆ ಅಸಹಾಯಕ ಅಂತರಾತ್ಮ

ಈ ನ್ಯಾಯ ಹೆಣ್ಣಿಗೊಂದೇ ಏಕೆ, ಆಧುನಿಕ ಯೋಚನಾಲಹರಿ
ಹೆಣ್ಣು ಎಷ್ಟೇ ಮೆರೆದರೂ ಅವಳಬಲೆ ಅನ್ನೋ ಪುರಾತನ ತತ್ವ
ದ್ವಂದ್ವದಾ ಮನಸಿನಲಿ ಸರಿತಪ್ಪುಗಳ ತರ್ಕ

ಹೆಜ್ಜೆ ಮುಂದಿಟ್ಟರೆ ಹೆಮ್ಮಾರಿಪಟ್ಟ ಹಿಂದಿಡಲು ತಡೆವಾ  ಸ್ವಾಭಿಮಾನದ ಕಟ್ಟ
ಮುಂದೆಸಾಗದ,ಹಿಂತಿರುಗದ ಒಂಟಿಕಾಲಿನ ಪಯಣ
ಸೆಳೆದೊಯ್ಯಬಹುದೇ ಆಧ್ಯಾತ್ಮದ ಕಡೆಗೆ..