Thursday, 30 May 2013

ಹೃದಯ ರಾಗ

ಎಸೆದು ಹೊರಟ ಕೊಳಲನೆತ್ತಿ
ಮತ್ತೆ ನುಡಿಸಿದೆ
ಶೃತಿಯು ಯಾಕೋ ಸೇರಲಿಲ್ಲ
ಭಾವ ಸೆಲೆಯಲಿ

ಕೊರಳು ಉಬ್ಬಿ ಮನವ ತಬ್ಬಿ
ಉಸಿರಿಗೂ ಕಷ್ಟ
ಸಾಧನೆಯೇನೊ ಸಡೆಸುತ್ತಿತ್ತು
ದುಃಖ ತಪ್ತ ಚಿತ್ತ

ಹಾಡುಯೇನೊ ರಾಗವೇನೊ
ಲಯವ ತಪ್ಪಿದೆ
ಮನವು  ಎಲ್ಲೋ ಕಳೆದು ಹೋಗಿ
ಹೃದಯ ದ್ರವಿಸಿದೆ


ಖುಷಿಯ ರಾಗ ಹೇಗೆ ಸಾದ್ಯ
ಮುರಿದ ಹೃದಯದಿ
ಶೋಕ ರಸವೇ ಹೊಮ್ಮುತಿತ್ತು
ಬೆಂದ ಮನದಲಿ,ಈ ಎಸೆದ ಕೊಳಲಲಿ

Saturday, 25 May 2013

ನಾನು ಮತ್ತು ಪಾರಿಜಾತ
ಇರುಳಲಿ ಅರಳಿ 
ಹಗಲಲಿ ಮುದುಡಿ 
ತೊರೆಯುವೆಯೇಕೆ ಅಮ್ಮನ ಮಡಿಲ 
ಒಂದು ರಾತ್ರಿಯೇ ನಿನಗೆ ಆಯಸ್ಸು 

ಇದ್ದರೇನಂತೆ ದೀರ್ಘಾಯಸ್ಸು 
ನನಸಾಗದೆ, ಉಳಿದರೆ ಕನಸು 
ನನ್ನಿಯನ ಜೊತೆ ರಾತ್ರಿಯ ಕಳೆವೆ 
ಅರಳಿ ಸುಖದಲಿ ನಾ ಸಾರ್ಥಕತೆ ಪಡೆವೆ 

ಚಂದ್ರನ ಕಂಡು ನಗುತೊರುವೆ ನೀ
ಎಲ್ಲೆಲ್ಲಿಯೂ ಹರಡುವೆ ಮರಿಮಳವ
ರವಿಯನು ಕಂಡರೆ ಮುಖ ಬಾಡಿಸುವೆ
ನಿನಗೇತಕೆ ಅವನಲಿ ಮುನಿಸು

ಚಂದ್ರನ ಅಂದ ರವಿಯಲಿ ಇಲ್ಲ
ತಂಪನು ಸುರಿದು ಅವ ರಮಿಸೊಲ್ಲ
ಶಾಖದ ಝಳಕ ನನಗಾಗಲ್ಲ
ಸೋಕ್ಷ್ಮವೇ ತಿಳಿಯದ ಅವನಲಿ ಮನಸಿಲ್ಲ

Sunday, 12 May 2013

ಬದುಕು 
ನಿನ್ನ ನಡತೆ ಮಾಡುವುದೊಮ್ಮೊಮ್ಮೆ 
ಧರಿಸುವಂತೆ ಕೋಪವೆಂಬಾಭರಣ
ಮನದಲುದ್ಭವಿಸಿ ಹರಿಯುವದು ತೊರೆಯಂತೆ 
ಮೂಕರೋಧನ ದಾಟಿ ಕಣ್ಣಿನಾವರಣ 
ಏನು ಮಾಡಲಿ ಹೇಳು ನಿನಗೇ ಗೊತ್ತು
ಧರಿಸಿರಲಾರೆ ನಾ ಅದನು ತುಂಬಾ ಹೊತ್ತು

ಹೃದಯ ಚುಚ್ಚುವದು ಕ್ಷಮಿಸಿ ಬಿಡು ಅವನನ್ನು
ಬಾಳಲ್ಲಿ ಜೊತೆಜೊತೆಗೆ ಹೆಜ್ಜೆ ಇರಿಸಿದವನು
ಪ್ರೀತಿಯಾ ಹೊಳೆ ಹರಿಸಿ ನಿನ್ನದೇ ಆದ ಜೀವ
ಬದಲಿಸಿಕೊ ಕೋಪವನು ಬೆರೆಸಿ ಕುಷಿಯ ಭಾವ
ಧರಿಸಿಬಿಡು ತನುಮನದಿ ನಗುವಿನಾಭರಣ
ಹೊಂದಾಣಿಕೆಯ ಮಂತ್ರವೇ ಬದುಕಿಗೆ ಹೂರಣ

Sunday, 5 May 2013

ಅಂಬರ 
ಕಡು ನೀಲಿ ಸೀರೆಗೆ 
ಚಿನ್ನದ ಚುಕ್ಕಿ ಇಟ್ಟಂತೆ 
ಕಂಗೊಳಿಸುತಿದೆ ಅಂಬರ 
ಕಣ್ಣರಳಿಸಿ ನೋಡಲು 
ಅದರ ನಯ ನಾಜೂಕು 
ಆಹಾ ಎಂತ ಸುಂದರ 
ಯಾರು ಹಚ್ಚಿದರೋ ಆ ಚುಕ್ಕಿ 
ಮೈಎಲ್ಲಾ ನಿನಗೆ 
ಎಷ್ಟೇ ಹುಡುಕಿದರೂ ಸಿಗಲಿಲ್ಲ 
ಅಂತಹ ಸೀರೆ ನನಗೆ

Wednesday, 10 April 2013


ಆಸೆ
ಬರಬೇಕೆಂದಿರುವೆ ನಿನ್ನ ಕನಸಲಿ ಒಮ್ಮೆ
ಯಾವ ರೂಪದಿ ಬರಲಿ
ತಿಳಿಸುವೆಯಾ ಗೆಳೆಯಾ

ಕೋಗಿಲೆಯಾಗಿ ಬಂದು ಇಂಪಾಗಿ
ನಿನ್ನಿದಿರು ಹಾಡೊಂದು ಹಾಡಲೇ
ನವಿಲಾಗಿ ಬಂದು ನರ್ತಿಸಿ
ನಿನ್ನ ಕನಸುಗಳಿಗೆ ಬಣ್ಣ ತುಂಬಲೇ
ಗಿಳಿಯಾಗಿ ಬಂದು ಮುದ್ದು ಮಾತುಗಳಿಂದ
ನಿನಗೆ ಮುದ ನೀಡಲೇ
ಹಂಸವಾಗಿ ಬಂದು ನಿನ್ನ
ಕನಸಿನ ಸಾಗರದಲಿ ನಾ ಈಜಲೇ

ಯಾವ ರೂಪದಿ ಬರಲಿ
ತಿಳಿಸುವೆಯಾ ಗೆಳೆಯಾ

ಚಂದ್ರನಾಗಿ ಬಂದು ಬೆಳದಿಂಗಳ
ನಿನ್ನ ಮೇಲೆ ಸುರಿಯಲೇ
ಕವಿಯಾಗಿ ಬಂದು ನಿನ್ನ ಮೇಲೆ
ಕವಿತೆಯನು ಬರೆಯಲೇ
ತಂಗಾಳಿಯಾಗಿ ಬಂದು ಮೈಸೋಕಿ
ತಣ್ಣನೆಯ ಸ್ಪರ್ಶದಲಿ ನಡುಗಿಸಲೇ
ಸೂರ್ಯ ರಶ್ಮಿಯಾಗಿ ಬಂದು ನಾ
ನಿನ್ನ ಕೆನ್ನೆ ಚುಂಬಿಸಿ ಎಬ್ಬಿಸಲೇ

ಯಾವರೂಪದಿ ಬರಲಿ ನಾ
ನಿನ್ನ ಕನಸಲಿ ಗೆಳೆಯಾ
ಕಾತರದಿ ಕಾಯುತಿಹೆ
ಬೇಗ ನೀ ತಿಳಿಸುವೆಯಾ

Friday, 8 February 2013


ಗೈರು
ಇಂದೇಕೋ ಅನಿಸುತಿದೆ ಗೆಳೆಯಾ
ಹೇಳಬೇಕೆಂದು ನಿನಗೆ ವಿದಾಯ
ಬರಡಾಗಿ ನಿಂತಿವೆ ಕನಸು ಫಲಿಸದೆ ನೀ ಕೊಟ್ಟ ಅಭಯ
ಬದುಕ ಬೇಕೆನಿಸಿದೆ ಬೇಡದೆ ಯಾರ ಹಂಗಿನ ಸಹಾಯ

ನನ್ನ ಜಾಗದಲಿ ಕಾಣುತಿದೆ ಬೇರೆಯದೇ ನೆರಳು
ಕಾಣದಾಗಿದೆ ನಿನಗೆ ವೇದನೆಯಲಿ ಹೊಯ್ದಾಡೋ ನನ್ನ ಕರುಳು
ನಾ ತಿಳಿದಿದ್ದೆ ನೀ ನನಗೆ ಆ ದೇವರು ಕೊಟ್ಟ ಹರಳು
ನನ್ನ ಮನಸೇ ಗಹಗಹಿಸಿದೆ ಪೆದ್ದಿ ನಿನಗೆಲ್ಲೋ ಮರುಳು

ಸ್ವಾಭಿಮಾನವ ತುಂಬುವಲ್ಲಿ ದಾರಾಳಿಯಾದ ಆ ದೇವರು
ಬದುಕೋ ಛಲ ಮೂಡಿಸಿದ ಇದ್ದರೂ ನಿನ್ನ ಗೈರು
ನಿನಗಾಗಿ ಪರಿತಪಿಸಿ ಸುರಿಸಲು ಬತ್ತಿದೆ ಕಣ್ಣೀರು
ಆಧ್ಯಾತ್ಮ ಸತ್ಯ ಬದುಕಲ್ಲಿ ಯಾರಿಗುಂಟು ಯಾರು 

Sunday, 2 December 2012

ಭರವಸೆ 
ಮಂಜು ಮುಸುಕಿದ ಹಾದಿಯಿದು 
ಜೊತೆ ಮುಸ್ಸಂಜೆಯೂ ಆಗಿಹುದು 
ಎಲ್ಲೆಂದು ಹುಡುಕಲಿ ನಾ ನಿನ್ನ 
ಬಂದು ಸೇರಲಾರೆಯಾ ನೀ ನನ್ನ 
ಕತ್ತಲಾವರಿಸೊ ಮುನ್ನ 
ದಾರಿಯುದ್ದಕೂ ಅರಳಿ ಸತ್ತ 
ಆಸೆ ಹೂಗಳು ಹಲವು 
ಸಿಗದಿರೆ ಎಲ್ಲೆಲ್ಲೂ ನಿನ್ನ 
ಇರುವಿಕೆಯ ಕುರುಹುಗಳು 

ಆದರೇನಂತೆ ಹೊಳೆಯುತಿದೆ ಎದೆಯಲ್ಲಿ
ಸೋಲನೊಪ್ಪದ ನಂಬಿಕೆಯ ಕಿಚ್ಚು
ಬಂದು ಸೇರುವೆ ನೀ ನನ್ನ
ಕತ್ತಲಾವಾರಿಸೊ ಮುನ್ನ
ಅಂದು ಶಬರಿಯ ಭರವಸೆಯು
ಕರೆತರಲಿಲ್ಲವೇ ಶ್ರೀ ರಾಮನನ್ನ
ಬರದಿದ್ದರಲ್ಲಿ ನಡೆಯುತ್ತಿತ್ತು
ನಂಬಿಕೆಯ ಮಾರಣ ಹೋಮ
ಮುಸ್ಸಂಜೆಯಾದರೆನಂತೆ ಕತ್ತಲಲ್ಲವಲ್ಲ
ದೀವಟಿಗೆ ನೀ ಹಿಡಿದು ನಡೆಸಲು
ಬಂದು ಸೇರುವೆ ನನ್ನ
ಕತ್ತಲಾಗುವ ಮುನ್ನ ...